ವಿವಾಹ ಕಾರ್ಯಕ್ರಮವೊಂದು ಬರೋಬ್ಬರಿ 63 ಜೀವಿಗಳ ಸಾವಿಗೆ ಕಾರಣವಾದ ವಿಲಕ್ಷಣ ಘಟನೆಯೊಂದು ಓಡಿಶಾದ ಬಾಲಸೋರ್ ಜಿಲ್ಲೆಯ ಕಂದಗರಡಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಪರಿದಾ ಅವರ ಮಗಳ ವಿವಾಹದ ಪ್ರಯುಕ್ತ ರಾತ್ರಿ 11 ಗಂಟೆ ಸುಮಾರಿಗೆ ಮದುವೆ ಮೆರವಣಿಗೆಯು ಗ್ರಾಮವನ್ನು ಪ್ರವೇಶಿಸಿತ್ತು. ಮೆರವಣಿಗೆ ವೇಳೆ ಡಿಜೆ, ಅಬ್ಬರದ ಸಂಗೀತದ ಜೊತೆಯಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು.
ರಾಮಚಂದ್ರ ಪರಿದಾ ಮಗಳ ಮದುವೆ ಸಂಭ್ರಮದಲ್ಲಿ ತೇಲುತ್ತಿದ್ದರೆ ಇತ್ತ ನೆರೆಮನೆಯ ರಂಜಿತ್ ಪರಿದಾ ಎಂಬವರ ಮನೆಯಲ್ಲಿದ್ದ 63 ಕೋಳಿಗಳು ಅಬ್ಬರದ ಸಂಗೀತಕ್ಕೆ ಬೆಚ್ಚಿಬಿದ್ದು ಪ್ರಾಣತೆತ್ತಿವೆ ಎಂಬ ಆರೋಪ ಕೇಳಿ ಬಂದಿದೆ. 2000 ಕೋಳಿಗಳು ಮದುವೆ ದಿಬ್ಬಣದ ಶಬ್ದಕ್ಕೆ ಆಘಾತಕ್ಕೆ ಒಳಗಾಗಿದ್ದವು. ಇದರಲ್ಲಿ 63 ಕೋಳಿಗಳು ಸಾವನ್ನಪ್ಪಿವೆ ಎಂದು ರಂಜಿತ್ ಆರೋಪಿಸಿದ್ದಾರೆ.
ಈ ಸಂಬಂಧ ರಾಮಚಂದ್ರ ಪರಿದಾ ವಿರುದ್ಧ ರಂಜಿತ್ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಕೋಳಿಗಳ ಸಾವಿಗೆ ರಾಮಚಂದ್ರ ಪರಿದಾ ಪುತ್ರಿಯ ಮದುವೆ ದಿಬ್ಬಣದ ಮೆರವಣಿಗೆಯೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ರಾಮಚಂದ್ರ, ಸಾಕಷ್ಟು ಬ್ರಾಯ್ಲರ್ ಕೋಳಿಗಳು ರಸ್ತೆಯಲ್ಲಿ ಕರ್ಕಶವಾಗಿ ಕೂಗುವ ವಾಹನಗಳ ಹಾರ್ನ್ ಶಬ್ದವನ್ನು ಕೇಳಿಸಿಕೊಳ್ಳುತ್ತವೆ. ಅಂತ್ರದಲ್ಲಿ ಇವರ ಕೋಳಿ ಹೇಗೆ ಶಬ್ದಕ್ಕೆ ಸಾಯಲು ಸಾಧ್ಯ..? ಅದೂ ಅಲ್ಲದೇ ನಾವು ಮನೆಯ ಹತ್ತಿರದಲ್ಲಿ ಡಿಜೆ ಸದ್ದನ್ನು ಕಡಿಮೆ ಮಾಡಿದ್ದೆವು ಎಂದು ಹೇಳಿದ್ರು.
ಈ ವಿಚಾರವಾಗಿ ಮಾತನಾಡಿದ ಪೊಲೀಸ್ ಅಧಿಕಾರಿ ದ್ರೌಪದಿ ದಾಸ್, ಈ ದೂರಿನ ಸಂಬಂಧ ಇಬ್ಬರನ್ನೂ ಮಾತುಕತೆಗೆ ಕರೆದಿದ್ದೇನೆ. ಇದು ನನ್ನ ವೃತ್ತಿ ಜೀವನದಲ್ಲಿ ಹೊಸ ಪ್ರಕರಣವಾಗಿದೆ. ಕೇಸ್ ಇನ್ನಷ್ಟೇ ದಾಖಲಾಗಬೇಕಿದೆ. ಹಾಗೂ ದೂರಿನ ಸಂಬಂಧ ಪಶುವೈದ್ಯಾಧಿಕಾರಿಗಳ ಸಲಹೆಯನ್ನೂ ಕೇಳಲಿದ್ದೇವೆ ಎಂದು ಹೇಳಿದ್ರು.