ಕಿಯೋಂಜಾರ್: ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬರು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸ್ ವ್ಯಾನ್ನಲ್ಲಿ 12 ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಆರೋಪಿಸಿದ್ದಾರೆ.
ಕಿಯೋಂಜಾರ್ ಜಿಲ್ಲೆಯ ಆನಂದಪುರ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಸೊಸ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.
37 ವರ್ಷದ ಮಹಿಳೆಯನ್ನು ಗುರುವಾರ ಬೆಳಗ್ಗೆ ಆನಂದಪುರ ಉಪವಿಭಾಗೀಯ ಆಸ್ಪತ್ರೆಗೆ ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ಯಲಾಯಿತು, ಅಲ್ಲಿ ಅಪರಾಧ ಸಂಭವಿಸಿದ ಸ್ಥಳವು ಸಲಾನಿಯಾ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರುವುದರಿಂದ ವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರಾಕರಿಸಿದರು.
ನಂತರ ಮಹಿಳೆಯೊಂದಿಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ಆಕೆಯನ್ನು ಸಲಾನಿಯಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ನಡೆಸಲು ಸಲಾನಿಯಾ ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣ ಆಕೆಯನ್ನು ಪೊಲೀಸ್ ವ್ಯಾನ್ ನಲ್ಲಿ ಕೂರಿಸಲಾಗಿದೆ.
ಪೊಲೀಸರು ಮತ್ತೆ ಮಹಿಳೆಯನ್ನು ಆನಂದಪುರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದರು, ಗುರುವಾರ ರಾತ್ರಿ 9.30 ರ ಸುಮಾರಿಗೆ ವೈದ್ಯರು ಪ್ರಾಥಮಿಕ ಪರೀಕ್ಷೆ ನಡೆಸಿದ್ದಾರೆ. ಬಳಿಕ ರಾತ್ರಿ ಸಮಯದಲ್ಲಿ ಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ತಿಳಿಸಿ ಮರುದಿನ ಬರಲು ಹೇಳಲಾಗಿತ್ತು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಮಹಿಳೆ ಅಂತಿಮವಾಗಿ ಶುಕ್ರವಾರ ತನ್ನ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ವೈದ್ಯರು ಇಲ್ಲದ ಕಾರಣ ವೈದ್ಯರು ನಮ್ಮನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ನಾವು ಉದ್ದೇಶಪೂರ್ವಕವಾಗಿ ವೈದ್ಯಕೀಯ ಪರೀಕ್ಷೆಯನ್ನು ವಿಳಂಬ ಮಾಡಿಲ್ಲ ಎಂದು ಸೊಸ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಸೇಥಿ ಹೇಳಿದ್ದಾರೆ.
ಜನವರಿ 18 ರಂದು ಬುಧವಾರ ಯುವತಿ ತನ್ನ ಸೋದರಸಂಬಂಧಿಯೊಂದಿಗೆ ಸಂಬಂಧಿಕರ ಮನೆಯಿಂದ ಹಿಂದಿರುಗುತ್ತಿದ್ದಾಗ ಗೋಹಿರಾಬಾಯಿ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಸೋದರ ಸಂಬಂಧಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.