ಮಾನವ ಮತ್ತು ಪ್ರಾಣಿಗಳ ನಡುವಿನ ಸಂಬಂಧವು ಬಹಳ ವಿಶೇಷವಾಗಿದೆ. ನಾಯಿಗಳು ಮನುಷ್ಯನನ್ನು ಬಹಳ ಪ್ರೀತಿಸುತ್ತವೆ. ಜನರು ಕೂಡ ತಮ್ಮ ಸಾಕುನಾಯಿಯ ಜೊತೆ ವಿಶೇಷ ಬಾಂಧವ್ಯ ಹೊಂದಿರುತ್ತಾರೆ. ಇದೀಗ ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿ ಕುಟುಂಬವೊಂದು ಸುಮಾರು 16 ವರ್ಷಗಳ ಕಾಲ ಜೊತೆಗಿದ್ದ ಸಾಕು ನಾಯಿಯ ಅಂತ್ಯಕ್ರಿಯೆಯನ್ನು ಭವ್ಯವಾದ ಮೆರವಣಿಗೆ ಮೂಲಕ ನಡೆಸಿದೆ.
ಸಾಕು ನಾಯಿ ಅಂಜಲಿಯ ಮಾಲೀಕ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. 16 ವರ್ಷಗಳ ಹಿಂದೆ ನಾಯಿಯನ್ನು ಮನೆಗೆ ಕರೆತಂದಿದ್ದಾಗಿ ಅವರು ಹೇಳಿದ್ರು. ಕಾಲಕ್ರಮೇಣ ಅನೇಕ ನಾಯಿಗಳನ್ನು ದತ್ತು ಪಡೆದರೂ, ಅಂಜಲಿ ಶ್ವಾನವು ತನಗೆ ಬಹಳ ಅದೃಷ್ಟವನ್ನು ತಂದುಕೊಟ್ಟಿತು ಎಂದು ಅವರು ಹೇಳುತ್ತಾರೆ.
ಆದರೆ, ಸೋಮವಾರ ಬೆಳಗ್ಗೆ ಅಂಜಲಿ ಸಾವನ್ನಪ್ಪಿದ್ದು, ನಾಯಿಯ ಮೇಲೆ ಅಪಾರ ಪ್ರೀತಿ ಹೊಂದಿರುವ ಕುಟುಂಬವನ್ನು ಕಂಗಾಲಾಗಿಸಿದೆ. ಸಾಕುಪ್ರಾಣಿ ಸಾವಿನ ನಂತರ ಕುಟುಂಬದ ಸದಸ್ಯರು ಬಹಳ ನೋವಿನಲ್ಲಿದ್ದಾರೆ. ಮನುಷ್ಯರಂತೆ ಅದಕ್ಕೂ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಸಾಕು ಪ್ರಾಣಿಯನ್ನು ಮನೆಯಿಂದ ಹೊರಗೆ ಕರೆತರುವ ಮುನ್ನ ನಾಯಿಗೆ ಅರಿಶಿನದ ನೀರಿನಿಂದ ಸ್ನಾನ ಮಾಡಿಸಿ ಹೂಮಾಲೆ ಹಾಕಿದ್ದಾರೆ.
ನಂತರ ನಾಯಿಯನ್ನು ಡಿಜೆ ಸಂಗೀತದೊಂದಿಗೆ ಅಲಂಕರಿಸಿದ ವಾಹನಕ್ಕೆ ಕರೆದೊಯ್ಯಲಾಯಿತು. ಬಳಿಕ ನಗರದಲ್ಲಿ ಸಾಂಪ್ರದಾಯಿಕ ಸಂಗೀತ ವಾದ್ಯಗಳು, ಡಿಜೆಗಳು, ಪಟಾಕಿ ಸದ್ದುಗಳೊಂದಿಗೆ ಶವಯಾತ್ರೆ ನಡೆಸಲಾಯಿತು. ಮೆರವಣಿಗೆಯಲ್ಲಿ ಊರಿನ ಅನೇಕರು ಪಾಲ್ಗೊಂಡಿದ್ದರು.
ಬಳಿಕ ಸಾಂಪ್ರಾದಾಯಿಕ ವಿಧಿವಿಧಾನದಂತೆ ಸಾಕಿದ ನಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು, ಮರಣಾನಂತರದ ಇತರೆ ವಿಧಿವಿಧಾನಗಳನ್ನು ಸಂಪ್ರದಾಯದಂತೆ ನಡೆಸಲಾಗುವುದು ಎಂದಿದ್ದಾರೆ.
ಮೊದಲು, ತಾನು ಜೀವನೋಪಾಯಕ್ಕಾಗಿ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದೆ, ಬಹಳ ಕಷ್ಟದ ಜೀವನವನ್ನು ನಡೆಸುತ್ತಿದ್ದೆ. ಆದರೆ, ಅಂಜಲಿ ನಮ್ಮ ಜೀವನಕ್ಕೆ ಬಂದ ನಂತರವೇ ತನ್ನ ಆರ್ಥಿಕ ಸಂಕಷ್ಟ ಕೊನೆಗೊಂಡಿತು. ನಂತರ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ಚಿಕಿತ್ಸೆ ನೀಡಿದರೂ ಆಕೆಯ ಜೀವ ಉಳಿಸಲಾಗಲಿಲ್ಲ ಎಂದು ನಾಯಿಗೆ ಮಾಲೀಕ ಕಣ್ಣೀರಿನ ವಿದಾಯ ಹೇಳಿದ್ದಾರೆ.