ಹತ್ತು ರಾಜ್ಯಗಳಲ್ಲಿ 27 ಮಹಿಳೆಯರನ್ನು ಮದುವೆಯಾಗಿದ್ದರ ಜೊತೆಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿರುವ ಒಡಿಶಾದ ರಮೇಶ್ ಸ್ವೈನ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ವಂಚನೆ ಆರೋಪದ ಮೇಲೆ ಒಡಿಶಾ ರಾಜ್ಯ ಪೊಲೀಸರು ಕಳೆದ ವರ್ಷ ಬಂಧಿಸಿದ್ದ ದೊಡ್ಡ ವಂಚಕನಿಗೆ ಈಗ ಇಡಿ ಕಂಟಕ ಬೆನ್ನೇರಿದೆ.
ಬಿಭು ಪ್ರಕಾಶ್ ಸ್ವೈನ್ ಎಂದೂ ಕರೆಯಲ್ಪಡುವ ಸ್ವೈನ್, 2011 ರಲ್ಲಿ ಹೈದರಾಬಾದ್‌ನ ಜನರಿಗೆ ತಮ್ಮ ಮಕ್ಕಳಿಗೆ ಎಂಬಿಬಿಎಸ್ ನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 2 ಕೋಟಿ ರೂಪಾಯಿ ವಂಚಿಸಿದ್ದ. 2006 ರಲ್ಲಿ ಕೇರಳದ 13 ಬ್ಯಾಂಕ್‌ಗಳಿಗೆ 128 ನಕಲಿ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2 ಕೋಟಿ ವಂಚಿಸಿದ್ದ. ಈ ಆರೋಪಗಳ ಮೇಲೆ ಆತನನ್ನು ಬಂಧಿಸಲಾಗಿತ್ತು.
ಒಡಿಶಾದ ಪೊಲೀಸರು ಸ್ವೇನ್ ಅವರ ಪತ್ನಿಯರಲ್ಲಿ ಒಬ್ಬರಾದ ಡಾ. ಕಮಲಾ ಸೇಥಿ ಮತ್ತು ಅವರ ಮಲತಂಗಿ ಮತ್ತು ಚಾಲಕನನ್ನು ಬಂಧಿಸಿದ್ದಾರೆ. ಇವರೆಲ್ಲರಿಗೂ ಒರಿಸ್ಸಾ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಎಂಟು ತಿಂಗಳ ಕಾಲ ಆತನ ಮೇಲೆ ನಿಗಾ ಇರಿಸಿದ್ದ ಒಡಿಶಾ ಪೊಲೀಸ್ ವಿಶೇಷ ದಳವು ಫೆಬ್ರವರಿ 13 ರಂದು ಸ್ವೈನ್ ಅವರನ್ನು ಬಂಧಿಸಿತ್ತು.
ಆತ ವಿವಾಹವಾದ ಮಹಿಳೆಯರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಸಹಾಯಕ ಕಮಾಂಡೆಂಟ್, ಛತ್ತೀಸ್‌ಗಢದ ಚಾರ್ಟರ್ಡ್ ಅಕೌಂಟೆಂಟ್, ಅಸ್ಸಾಂನ ವೈದ್ಯರು, ಇಬ್ಬರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ವಕೀಲರು ಮತ್ತು ಕೇರಳ ಆಡಳಿತ ಸೇವಾ ಅಧಿಕಾರಿ ಸೇರಿದ್ದಾರೆ.