![](https://kannadadunia.com/wp-content/uploads/2023/09/odisha-bank.jpeg)
ಒಡಿಶಾ: ಇದ್ದಕ್ಕಿದ್ದಂತೆ ನಿಮ್ಮ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಜಮಾ ಆಗಿದೆ ಎಂಬುದು ಗೊತ್ತಾದರೆ ಏನು ಮಾಡುತ್ತೀರಿ? ತಕ್ಷಣ ಬ್ಯಾಂಕ್ ಗೆ ಹೋಗಿ ಎಲ್ಲಾ ಹಣವನ್ನು ಡ್ರಾ ಮಾಡಿಕೊಳ್ಳಲು ಮುಂದಾಗಿತ್ತಿರಿ. ಇಂತದ್ದೊಂದು ಅಚ್ಚರಿ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾ ಗ್ರಾಮ್ಯ ಬ್ಯಾಂಕ್ ನ ಗ್ರಾಹಕರ ಖಾತೆಗಳಿಗೆ ಅಪರಿಚಿತ ಮೂಲಗಳಿಂದ ಲಕ್ಷಾಂತರ ರೂಪಾಯಿ ಜಮಾ ಆಗಿದೆ. ಇದು ಗ್ರಾಹಕರಿಗೆ ಮಾತ್ರವಲ್ಲ ಬ್ಯಾಂಕ್ ನವರಿಗೂ ಕುತೂಹಲ ಮೂಡಿಸಿದೆ.
ಹೌದು. ಕೇಂದ್ರಪಾಡಾ ಜಿಲ್ಲೆಯ ಔಲ್ ಬ್ಲಾಕ್‌ನಲ್ಲಿರುವ ಒಡಿಶಾ ಗ್ರಾಮ್ಯ ಬ್ಯಾಂಕ್‌ನ ಬಟಿಪಾಡಾ ಶಾಖೆಯ ಬ್ರ್ಯಾಂಚ್ ನ 40 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಗುರುವಾರ ‘ಅಜ್ಞಾತ ಮೂಲಗಳಿಂದ’ ಲಕ್ಷಾಂತರ ರೂಪಾಯಿ ಜಮಾ ಆಗಿರುವುದು ಅಚ್ಚರಿ ಮೂಡಿಸಿದೆ.
ತಮ್ಮ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಬಂದಿರುವುದು ತಿಳಿಯುತ್ತಿದ್ದಂತೆ ನೂರಾರು ಖಾತೆದಾರರು ಹಣ ಹಿಂಪಡೆಯಲು ಬ್ಯಾಂಕ್‌ಗೆ ಮುಗಿಬಿದ್ದಿದ್ದಾರೆ. ಹಲವರು ಖಾತೆಗೆ ಬಂದ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹೆಚ್ಚಿನ ಜನರು ತಮ್ಮ ಖಾತೆಗೆ ಅಜ್ಞಾತ ಮೂಲದಿಂದ ಹಣ ಬಂದಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅನುಮಾನಾಸ್ಪದ ಮೂಲಗಳ ದೃಷ್ಟಿಯಿಂದ ಬ್ಯಾಂಕ್ ಅಧಿಕಾರಿಗಳು ಹಣ ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಹಣದ ಮೂಲವನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಬ್ಯಾಂಕ್‌ನ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಒಡಿಶಾ ಗ್ರಾಮ್ಯ ಬ್ಯಾಂಕ್ ಸರ್ಕಾರಿ ಒಡೆತನದ ಬ್ಯಾಂಕ್ ಆಗಿದ್ದು, ಒಡಿಶಾದಲ್ಲಿಯೇ ಜನಪ್ರಿಯ ಬ್ಯಾಂಕ್ ಆಗಿದೆ. ದೇಶಾದ್ಯಂತ 549 ಬ್ರ್ಯಾಂಚ್ ಗಳನ್ನು ಹೊಂದಿದ್ದು 55 ಲಕ್ಷ ಗ್ರಾಹಕರನ್ನು ಹೊಂದಿದೆ. ಇದೀಗ ಬಟಿಪಾಡಾ ಶಾಖೆಯ ಗ್ರಾಹಕರಿಗೆ ಏಕಾಏಕಿ ಅಜ್ಞಾತ ಮೂಲದಿಂದ ಲಕ್ಷಾಂತರ ರೂಪಾಯಿ ಜಮೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.