ಭುವನೇಶ್ವರ: ಒಡಿಶಾದ ಗುಡ್ಡಗಾಡು ಕೊರಾಪುಟ್ ಜಿಲ್ಲೆಯಲ್ಲಿ ಬಸ್ ಪಲ್ಟಿಯಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಯಿಪರಿಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಗುಪ್ತೇಶ್ವರ ಸಮೀಪದ ಡೋಕ್ರಿಘಾಟ್‌ನಲ್ಲಿ ಮುಂಜಾನೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಗಾಯಗೊಂಡ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಬಸ್ ಕಟಕ್ ನ ನಿಯಾಲಿಯಿಂದ ಸುಮಾರು 50 ಭಕ್ತರೊಂದಿಗೆ ಗುಪ್ತೇಶ್ವರ ದೇವಸ್ಥಾನಕ್ಕೆ ತೆರಳುತ್ತಿತ್ತು. ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮತ್ತು ಪೊಲೀಸರು ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಬೋಯಿಪರಿಗುಡಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಡ್ಡಗಾಡು ರಸ್ತೆಯ ತಿರುವುಗಳಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಶಂಕೆ ಇದೆ. ಮೃತರಲ್ಲಿ 12 ವರ್ಷದ ಬಾಲಕನೂ ಸೇರಿದ್ದಾನೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಹಲವರು ತಮ್ಮ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.