
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಪಶುವೈದ್ಯರು ಬೀದಿ ಹಸುವಿನ ಹೊಟ್ಟೆಯಿಂದ ಸುಮಾರು 15 ಕೆಜಿ ತೂಕದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಹಾಕಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ಪಶುವೈದ್ಯಕೀಯ ವೈದ್ಯ ಕಿರಣ್ ಕುಮಾರ್ ಬಿಸೋಯಿ ನೇತೃತ್ವದ ಪಶುವೈದ್ಯರ ತಂಡ ಆರು ವರ್ಷದ ಹಸುವಿಗೆ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಹೊರತೆಗೆದು ಹಸುವನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಹಸುವಿನ ಹೊಟ್ಟೆಯಿಂದ ಪಾಲಿಥಿನ್ ಚೀಲಗಳು, ಹೊದಿಕೆಗಳು ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಡಾ. ಬಿಸೋಯಿ ಹೇಳಿದರು.
ಅಸ್ವಸ್ಥಗೊಂಡ ಹಸುವನ್ನು ನಾಲ್ಕು ದಿನಗಳ ಹಿಂದೆ ಕೋರ್ಟ್ ಪೇಟಾ ಸಮೀಪದ ವಿದ್ಯಾನಗರದಿಂದ ರಕ್ಷಿಸಲಾಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಅದರ ಸ್ಥಿತಿಯನ್ನು ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಹಸುವನ್ನು ಆಸ್ಪತ್ರೆಗೆ ಕರೆತರುವಾಗ ಚಿಂತಾಜನಕ ಸ್ಥಿತಿಯಲ್ಲಿತ್ತು, ಕ್ಲಿನಿಕಲ್ ಪರೀಕ್ಷೆಯಲ್ಲಿ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿರುವುದು ಕಂಡುಬಂದಿತ್ತು.
ಪಾಲಿಥಿನ್ ಚೀಲಗಳಲ್ಲಿ ಎಸೆಯುವುದರಿಂದ ಅವು ಬಿಡಾಡಿ ದನಗಳು ಹೊಟ್ಟೆ ಸೇರುತ್ತವೆ. ಅದರ ಹೊಟ್ಟೆಯಿಂದ ಪ್ಲಾಸ್ಟಿಕ್ ಹೊರತೆಗೆದ ನಂತರ, ಹಸುವಿನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.