ಸಾಮಾನ್ಯವಾಗಿ ತಾಯ್ತನದ ಬಳಿಕ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ದಪ್ಪಗಾಗುವುದು ಸರ್ವೇಸಾಮಾನ್ಯ. ಆದರೆ ಕೆಲವರಿಗೆ ಮಗುವಿನ ಜನನದ ನಂತರವೂ ತೂಕ ಕಡಿಮೆಯಾಗುವುದೇ ಇಲ್ಲ. ಹೆರಿಗೆಯ ನಂತರ ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಇದನ್ನು ತಪ್ಪಿಸಲು ಕೆಲವು ಎಚ್ಚರಿಕೆ ಕೂಡ ವಹಿಸಬೇಕು.
ಗರ್ಭಧಾರಣೆಯ ಆರಂಭದಿಂದಲೂ ಮಹಿಳೆಯರ ದೇಹದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಹೆರಿಗೆಯಾದ ತಕ್ಷಣ ತಮ್ಮ ಬಗ್ಗೆ ಅಸಡ್ಡೆ ಹೊಂದುತ್ತಾರೆ. ಇದರ ಪರಿಣಾಮ ತೂಕದ ಮೇಲೆ ಗೋಚರಿಸುತ್ತದೆ.
ಗರ್ಭಧಾರಣೆಯ ನಂತರ ತೂಕ ಹೆಚ್ಚಾಗುವುದೇಕೆ?
ಗರ್ಭಾವಸ್ಥೆಯಲ್ಲಿ ಮಹಿಳೆಯರ ಆಹಾರ ಸೇವನೆ ಪ್ರಮಾಣ ಕೊಂಚ ಹೆಚ್ಚಾಗುತ್ತದೆ. ಮಗುವಿನ ಪೋಷಣೆಗಾಗಿ ಅನೇಕ ರೀತಿಯ ತಿನಿಸುಗಳನ್ನು ಸೇವನೆ ಮಾಡಬೇಕಾಗುತ್ತದೆ. ಹೆಚ್ಚಿನ ಕ್ಯಾಲೋರಿ ಸೇವನೆಯೊಂದಿಗೆ ತೂಕವೂ ಹೆಚ್ಚಾಗಲು ಪ್ರಾರಂಭಿಸುತ್ತದೆ.
ಮಹಿಳೆಯರು ಹೆಚ್ಚು ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸುವ ಸಮಯವೇ ಗರ್ಭಾವಸ್ಥೆ. ಇದರಿಂದ ಅವರ ದೇಹವು ಆರೋಗ್ಯಕರವಾಗಿರುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಅವರ ತೂಕ ಹೆಚ್ಚಾಗುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ವಿವಿಧ ಬದಲಾವಣೆಗಳಿಗೆ ಒಳಗಾಗುತ್ತಾರೆ. ಅವರಲ್ಲಿ ಉದ್ವಿಗ್ನತೆ ಇರುತ್ತದೆ. ಒತ್ತಡ ಕೂಡ ತೂಕವನ್ನು ಹೆಚ್ಚಿಸುತ್ತದೆ.
ಹೈಪೋಥೈರಾಯ್ಡಿಸಮ್ ನಿಂದಾಗಿ ಗರ್ಭಿಣಿಯರಲ್ಲಿ ಬೊಜ್ಜು ಕೂಡ ಹೆಚ್ಚಾಗುತ್ತದೆ. ಇದಲ್ಲದೆ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹವು ಭಾರವಾಗಿರುತ್ತದೆ.
ಹೆರಿಗೆಯ ನಂತರ ತೂಕವನ್ನು ನಿಯಂತ್ರಿಸುವುದು ಹೇಗೆ?
ಹೆರಿಗೆಯ ನಂತರ ದೇಹದ ಕೊಬ್ಬು ಕರಗಿಸುವುದು ಸುಲಭವಲ್ಲ. ಆದ್ದರಿಂದ ವೃತ್ತಾಕಾರದ ರೀತಿಯಲ್ಲಿ ನಿಧಾನವಾಗಿ ಕೆಲಸ ಮಾಡಬೇಕು.
ಹೆರಿಗೆಯ ನಂತರ ಮಹಿಳೆಯರು ತುಂಬಾ ಹಸಿವನ್ನು ಅನುಭವಿಸುತ್ತಾರೆ. ಇದರಿಂದಾಗಿ ಹೆಚ್ಹೆಚ್ಚು ತಿನ್ನಬೇಕಾಗುತ್ತದೆ. ಆದರೆ ಈ ರೀತಿ ಮಾಡಬೇಡಿ. ಹಸಿವಾದಾಗ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ. ದಿನಕ್ಕೆ 500 ಕ್ಯಾಲೊರಿಗಳನ್ನು ಕಡಿಮೆ ಮಾಡುವ ಮೂಲಕ, ಒಂದು ವಾರದಲ್ಲಿ ತೂಕವನ್ನು ಕಳೆದುಕೊಳ್ಳಬಹುದು.
ದಿನವಿಡೀ ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಹೆರಿಗೆಯ ನಂತರ ಮಹಿಳೆಯರಿಗೆ ಹೆಚ್ಚಿನ ಕ್ಯಾಲೋರಿಗಳು ಮತ್ತು ಶಕ್ತಿಯ ಅಗತ್ಯವಿರುತ್ತದೆ. ತೂಕವನ್ನು ಕಳೆದುಕೊಳ್ಳಲು, ಕ್ಯಾಲೋರಿ ಸೇವನೆಯ ಮೇಲೆ ಗಮನ ಕೇಂದ್ರೀಕರಿಸಬೇಕು.
ಹೆರಿಗೆಯ ನಂತರ ತೂಕವನ್ನು ಕಡಿಮೆ ಮಾಡಲು ಮಗುವಿಗೆ ಸರಿಯಾಗಿ ಸ್ತನ್ಯಪಾನ ಮಾಡಿ. ಅಷ್ಟೇ ಅಲ್ಲ ಜೀವನಶೈಲಿಯನ್ನು ಸುಧಾರಿಸಿಕೊಳ್ಳಿ. ದಿನವಿಡೀ ಕ್ರಿಯಾಶೀಲರಾಗಿರಿ. ಸಾಧ್ಯವಾದಷ್ಟು ಕೆಲಸ ಮತ್ತು ನಿಯಮಿತ ವ್ಯಾಯಾಮದ ಮೂಲಕ ತೂಕ ಇಳಿಸಬಹುದು.