ನವದೆಹಲಿ: ಒಬಿಸಿ ಮೀಸಲಾತಿ ಮಾನ್ಯತೆ ಅಧಿಕಾರ ಮತ್ತು ರಾಜ್ಯಗಳ ವ್ಯಾಪ್ತಿಗೆ ನೀಡಲಾಗುವುದು. ಇದಕ್ಕಾಗಿ ಸಂವಿಧಾನ ತಿದ್ದುಪಡಿಗೆ ಸಂಪುಟ ಸಭೆ ಅಸ್ತು ಎಂದಿದೆ. 2018 ರಲ್ಲಿ ಈ ಕುರಿತ ಹಕ್ಕನ್ನು ಕೇಂದ್ರ ತನ್ನ ವ್ಯಾಪ್ತಿಗೆ ಪಡೆದುಕೊಂಡಿತ್ತು.
ಈಗ ಇತರ ಹಿಂದುಳಿದ ವರ್ಗಗಳ -ಒಬಿಸಿ ಪಟ್ಟಿಗೆ ಯಾವುದೇ ಜಾತಿಯನ್ನು ಸೇರಿಸುವ ಅಧಿಕಾರವನ್ನು ಮತ್ತೆ ರಾಜ್ಯಸರ್ಕಾರಗಳಿಗೆ ನೀಡಲಾಗುವುದು. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ಈ ಮಸೂದೆ ಅಂಗೀಕಾರಗೊಂಡು ಕಾಯ್ದೆ ಜಾರಿಯಾದಲ್ಲಿ ಕೇಂದ್ರ ಸರ್ಕಾರ 2018ರಲ್ಲಿ ಅಂಗೀಕರಿಸಿದ ಸಂವಿಧಾನದ 102ನೇ ತಿದ್ದುಪಡಿ ಮತ್ತು ಸುಪ್ರೀಂ ಕೋರ್ಟ್ ಆದೇಶದಿಂದ ಉಂಟಾದ ಗೊಂದಲ ಬಗೆಹರಿಯಲಿದೆ ಎಂದು ಹೇಳಲಾಗಿದೆ.
ಇನ್ನು ಒಬಿಸಿ ಮಾನ್ಯತೆ ಅಧಿಕಾರ ರಾಜ್ಯಗಳ ವ್ಯಾಪ್ತಿಗೆ ಬಂದಲ್ಲಿ ಒಕ್ಕಲಿಗರು, ಲಿಂಗಾಯಿತರು ಸೇರಿ ವಿವಿಧ ಸಮುದಾಯಗಳ ಒಳಪಂಗಡಗಳು ಸೇರಿದಂತೆ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ಜಾತಿಗಳ ಬಗ್ಗೆ ನಿರ್ಧರಿಸಲು ಅನುಕೂಲವಾಗುತ್ತದೆ. ಹಲವು ಜಾತಿಗಳ ಮೀಸಲಾತಿ ಬೇಡಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.