ನೈಕಾ ಕಂಪನಿ ಸಂಸ್ಥಾಪಕಿ ಫಾಲ್ಗುಣಿ ನಾಯರ್ ದೇಶ ಕಂಡ ಏಳನೇ ಮಹಿಳಾ ಬಿಲಿಯೇನರ್ ಎಂಬ ಕೀರ್ತಿಗೆ ಇಂದು ಪಾತ್ರರಾಗಿದ್ದಾರೆ. ಇದು ಮಾತ್ರವಲ್ಲದೇ ಇನಿಷಿಯಲ್ ಪಬ್ಲಿಕ್ ಆಫರಿಂಗ್ನಲ್ಲಿ ಸ್ವಯಂ ನಿರ್ಮಿತ ಬಿಲಿಯೇನರ್ ಕೂಡ ಎನಿಸಿದ್ದಾರೆ.
ನೈಕಾದ ಮೂಲ ಕಂಪನಿ ಎಫ್ಎಸ್ಎನ್ ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವನ್ನು ಮುಂದುವರಿಸಿದೆ. ಬುಧವಾರದಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ನೈಕಾದ ಷೇರುಗಳು 80 ಪ್ರತಿಷತ ಪ್ರೀಮಿಯಂ ಸಂಪಾದಿಸಿದೆ.
ಬ್ಲೂಮ್ ಬರ್ಗ್ ಏಜೆನ್ಸಿ ನೀಡಿದ ಮಾಹಿತಿಯ ಪ್ರಕಾರ, ಸೌಂದರ್ಯವರ್ಧಕ ಸೇರಿದಂತೆ ವಿವಿಧ ಚಿಲ್ಲರೆ ವ್ಯಾಪಾರದ ಮಾರುಕಟ್ಟೆಯಾದ ನೈಕಾ ಮೊದಲ ಐದು ನಿಮಿಷಗಳಲ್ಲೇ 1 ಟ್ರಿಲಿಯನ್ ಕೋಟಿ ಮೌಲ್ಯವನ್ನು ತಲುಪಿದೆ. ನೈಕಾದ ಮಾರ್ಕೆಟ್ ಕ್ಯಾಪ್ ಈಗಾಗಲೇ ಕೈಗಾರಿಕಾ ದೈತ್ಯಗಳಾದ ಬ್ರಿಟಾನಿಯಾ, ಗೋದ್ರೇಜ್ ಹಾಗೂ ಇಂಡಿಗೋ ಸಮೀಪಿಸಿದೆ.
ಅಂದಹಾಗೆ ನೈಕಾ, ದೇಶದಲ್ಲಿ ಮಹಿಳಾ ನೇತೃತ್ವದ ಮೊದಲ ಯೂನಿಕಾರ್ನ್ ಆಗಿದೆ. ಫಾಲ್ಗುಣಿ ನಾಯರ್ ಈ ಕಂಪನಿಯನ್ನು 2012ರಲ್ಲಿ ಆರಂಭಿಸಿದರು. ಇದೊಂದು ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್ಸೈಟ್ ಆಗಿದ್ದು ಇಲ್ಲಿ ಸೌಂದರ್ಯವರ್ಧಕ, ವೈಯಕ್ತಿಕ ಆರೈಕೆಯ ಉತ್ಪನ್ನಗಳು ಮಾರಾಟಕ್ಕಿವೆ. ಕಂಪನಿ ಆರಂಭಿಸಿದ 8 ವರ್ಷಗಳಲ್ಲಿ 58 ವರ್ಷದ ಫಾಲ್ಗುಣಿ ನಾಯರ್, ಬಿಲಿಯೇನರ್ ಪಟ್ಟಿಗೆ ಸೇರಿದ್ದಾರೆ.