ಬೆಂಗಳೂರು: ಬಸ್ ಪ್ರಯಾಣಿಕ ಅಪಘಾತದಲ್ಲಿ ಗಾಯಗೊಂಡರೆ ಕೂಡಲೇ ಆತನಿಗೆ ವೈದ್ಯಕೀಯ ನೆರವು ಕಲ್ಪಿಸುವುದು ಮತ್ತು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ ಹಾಗೂ ನಿರ್ವಾಹಕನ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ.
ಬಸ್ ನಿಂದ ಇಳಿಯುವಾಗ ಪ್ರಯಾಣಿಕನೊಬ್ಬ ರಸ್ತೆಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ಘಟನೆಯ ಕುರಿತಾಗಿ ದೂರು ನೀಡಲು ವಿಳಂಬ ಮಾಡಿದ ಪ್ರಕರಣದಲ್ಲಿ ಚಾಲಕ, ನಿರ್ವಾಹಕ ನಿರ್ಲಕ್ಷ ತೋರಿದ ಹಾಗೂ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಾರಿಗೆ ನಿಗಮ ಹಾಗೂ ಚಾಲಕನಿಗೆ 16.95 ಲಕ್ಷ ರೂ ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC) ಬಸ್ ನಿಂದ ಪ್ರಯಾಣಿಕ ಕೆಳಗೆ ಇಳಿಯುವಾಗ ಚಾಲಕ ದಿಢೀರ್ ಆಗಿ ಬಸ್ ಮುಂದಕ್ಕೆ ಚಾಲನೆ ಮಾಡಿದ್ದರಿಂದ ಪ್ರಯಾಣಿಕ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. 2017ರ ಜನವರಿ 31 ರಂದು ಉತ್ತರ ಕನ್ನಡ ಜಿಲ್ಲೆಯ ಮಜಲಿಯಿಂದ ಕಾರವಾರಕ್ಕೆ ತೆರಳಿದ್ದ ಬೀರೇಶ್ವರ ಹಿರೇನ್ ಬಸ್ ನಿಂದ ಕೆಳಗಿಳಿಯುವ ವೇಳೆ ಚಾಲಕ ಧಿಡೀರ್ ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡ ಬೀರೇಶ್ವರ ಆಯತಪ್ಪಿ ರಸ್ತೆಗೆ ಬದಿಯ ಕಲ್ಲಿನ ಮೇಲೆ ಬಿದ್ದು ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ದೂರು ನೀಡಲು 4 ದಿನಗಳ ಕಾಲ ವಿಳಂಬ ಮಾಡಿದ ಮತ್ತು ಬಸ್ ಮುಂದೆ ಚಲಾಯಿಸುವಲ್ಲಿ ನಿರ್ಲಕ್ಷ, ಕರ್ತವ್ಯ ಲೋಪ ಪರಿಗಣಿಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಮೃತ ಪ್ರಯಾಣಿಕನ ಕುಟುಂಬಕ್ಕೆ ಶೇಕಡ 6 ಬಡ್ಡಿ ದರದಲ್ಲಿ 16.95 ಲಕ್ಷ ರೂ. ಪರಿಹಾರ ನೀಡುವಂತೆ NWKRTC ಮತ್ತು ಘಟನೆಗೆ ಕಾರಣವಾದ ಬಸ್ ಚಾಲಕನಿಗೆ ನಿರ್ದೇಶನ ನೀಡಲಾಗಿದೆ. ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಪೀಠ ಈ ಆದೇಶ ನೀಡಿದೆ.