ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರಗಳಲ್ಲೊಂದು. ಬೆಳಗ್ಗೆ ಉಪವಾಸವಿರುವುದು ಅಪಾಯಕಾರಿ. ಉತ್ತಮ ಮತ್ತು ಸಮಯೋಚಿತ ಉಪಹಾರವನ್ನು ತಿಂದರೆ ಇಡೀ ದಿನ ಅದ್ಭುತ ಮತ್ತು ಶಕ್ತಿಯುತವಾಗಿರುತ್ತದೆ. ಕೆಲವರು ಬೆಳಗಿನ ಉಪಾಹಾರಕ್ಕಾಗಿ ನಟ್ಸ್ ಸೇವಿಸ್ತಾರೆ. ಇನ್ನುಕೆಲವರು ಮೊಟ್ಟೆಗಳನ್ನು ತಿನ್ನುತ್ತಾರೆ. ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂಬ ಗೊಂದಲ ಅನೇಕರನ್ನು ಕಾಡಬಹುದು.
ಬೆಳಗ್ಗೆ ಮೊಟ್ಟೆ ಅಥವಾ ನಟ್ಸ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದಾಗ್ಯೂ ಇವೆರಡರಲ್ಲಿ ಯಾವುದು ಉತ್ತಮ ಎಂದು ಕಂಡುಹಿಡಿಯುವುದು ಕಷ್ಟ. ಯಾಕೆಂದರೆ ಇವೆರಡರಲ್ಲೂ ಪೋಷಕಾಂಶಗಳು ಸಮೃದ್ಧವಾಗಿವೆ. ಸಾಮಾನ್ಯವಾಗಿ ಸಸ್ಯಾಹಾರಿಗಳು ನಟ್ಸ್ ಸೇವಿಸಲು ಇಷ್ಟಪಟ್ಟರೆ ಮಾಂಸಾಹಾರಿಗಳು ಬೆಳಗಿನ ಉಪಹಾರಕ್ಕೆ ಮೊಟ್ಟೆ ತಿನ್ನುತ್ತಾರೆ.
ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳಂತಹ ನಟ್ಸ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಅವುಗಳಲ್ಲಿ ಆರೋಗ್ಯಕರ ಕೊಬ್ಬುಗಳು, ಫೈಬರ್, ಪ್ರೋಟೀನ್, ವಿಟಮಿನ್ಗಳು ಮತ್ತು ಕಬ್ಬಿಣದ ಅಂಶಗಳಿವೆ. ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ಗಳು (A, D, B12) ಮತ್ತು ಹಲವಾರು ಖನಿಜಗಳಿವೆ. ಇದು ಕೂಡ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ವಿವಿಧ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ನಟ್ಸ್ ಹಾಗೂ ಡ್ರೈಫ್ರೂಟ್‌ಗಳು ಹೊಂದಿರುತ್ತವೆ.
ಮೊಟ್ಟೆಗಿಂತ ನಟ್ಸ್ ಹೆಚ್ಚು ಪ್ರಯೋಜನಕಾರಿ !
ಪ್ರಾಣಿ ಆಧಾರಿತ ಮಾಂಸ, ಮೊಟ್ಟೆ, ಡೈರಿ ಪದಾರ್ಥಗಳು, ಚಿಕನ್, ಬೆಣ್ಣೆ ಇವುಗಳಿಗಿಂತ ಸಸ್ಯ ಆಧಾರಿತ ಬೀಜಗಳು, ಕಾಳುಗಳು, ಧಾನ್ಯಗಳು, ಆಲಿವ್ ಎಣ್ಣೆಯಂತಹ ಪದಾರ್ಥಗಳು ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತವೆ. ಮೊಟ್ಟೆಯ ಬದಲು ಪ್ರತಿದಿನ 25 ಗ್ರಾಂ ಬೀಜಗಳನ್ನು ಸೇವಿಸಿದರೆ ಅದು ಹೃದಯ ಕಾಯಿಲೆಯಿಂದುಂಟಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಮೊಟ್ಟೆಗಳಿಗಿಂತ ನಟ್ಸ್‌ನಲ್ಲಿ ಫೈಬರ್ ಹೇರಳವಾಗಿರುತ್ತದೆ. ಈ ಫೈಬರ್ ಅಂಶವು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿದಂತಿಡುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಿಸಬಹುದು. ಮೊಟ್ಟೆಗಳಲ್ಲಿ ಫೈಬರ್ ಪ್ರಮಾಣವು ಸ್ವಲ್ಪ ಕಡಿಮೆಯಿರುತ್ತದೆ.