ಬಹುತೇಕ ಮಹಿಳೆಯರಿಗೆ 40 ವರ್ಷ ದಾಟಿತೆಂದರೆ ಫಿಟ್ ಆಗಿರೋದು ಹೇಗೆಂಬ ಚಿಂತೆ. ನಮ್ಮ ಬದುಕಿನಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ. ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದು ವಯೋಸಹಜ ವಿದ್ಯಮಾನ. ಫಿಟ್ ಆಗಿರೋದಕ್ಕೆ ನಿಯತ ವ್ಯಾಯಾಮ ಮತ್ತು ಆಹಾರ ಸೇವನೆ ಬಗ್ಗೆ ಗಮನಹರಿಸುವುದು ಅವಶ್ಯ.
40 ವರ್ಷ ದಾಟಿದ ಮಹಿಳೆಯರು ಫಿಟ್ ಆಗಿರುವುದು ಹೇಗೆ ಎಂಬುದನ್ನು ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ಇನ್‌ಸ್ಟಾಗ್ರಾಂನಲ್ಲಿ ವಿವರಿಸಿರೋದು ಹೀಗೆ. – “ನಲವತ್ತರ ನಂತರ ಎಲ್ಲವೂ ಬದಲಾಗುತ್ತದೆ. ನಿಮ್ಮ ಚಯಾಪಚಯವು ನಿಧಾನವಾಗುತ್ತದೆ. ಹೆಚ್ಚು ಸಿಹಿ ಪದಾರ್ಥ ತಿನ್ನಬೇಕೆನಿಸುತ್ತದೆ.
ಚೈತನ್ಯ ಕಡಿಮೆ ಆದಂತೆ ಆಗುತ್ತದೆ. ಈ ಅವಧಿಯಲ್ಲಿ ತೂಕ ಹೆಚ್ಚಾಗಲು ಇದೂ ಒಂದು ಕಾರಣ. ಬೇಸಲ್ ಮೆಟಾಬಾಲಿಕ್ ದರ (BMR) ಜೀವನದ ಪ್ರತಿ ದಶಕಕ್ಕೆ ಶೇಕಡ ಆರು ಕಡಿಮೆಯಾಗುತ್ತದೆ. ಋತುಬಂಧಕ್ಕೆ ಒಳಗಾದ ಮಹಿಳೆಯರಲ್ಲಿ ಸಬ್‌ಕ್ಲಿನಿಕಲ್ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ. ಪರಿಣಾಮ ನಲವತ್ತರ ನಂತರ ತೂಕವನ್ನು ಕಳೆದುಕೊಳ್ಳಲು ಹೆಚ್ಚು ಕಷ್ಟವಾಗುತ್ತದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೆ – ದಿನಕ್ಕೆ 30 ನಿಮಿಷ ವ್ಯಾಯಾಮ ಮಾಡಬೇಕು.
ಗರಿಷ್ಠ ಆರೋಗ್ಯ ಮತ್ತು ಚೈತನ್ಯಕ್ಕಾಗಿ ತಿನ್ನಬೇಕು. ನಿಯಮಿತ ವ್ಯಾಯಾಮ ಮತ್ತು ಆಹಾರದ ಸೇವನೆಯಲ್ಲಿ ನಿಯಂತ್ರಣ ಇದ್ದರೆ ಎಲ್ಲವೂ ಸಮತ್ವದಲ್ಲಿರುತ್ತದೆ”.
ಇವು ನಿಮ್ಮ ಜೀವನಶೈಲಿಯ ಭಾಗವಾಗಿರಲಿ
* ಬಾದಾಮಿ, ವಾಲ್‌ನಟ್ಸ್, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜಗಳು ಮತ್ತು ಬೀಜಗಳ ತಿಂಡಿ
* ಪ್ರೊಟೀನ್ ಸೇವನೆ ಹೆಚ್ಚಿಸಿ
* ಹೆಚ್ಚು ವ್ಯಾಯಾಮ ಮಾಡಿ
* ಆಹಾರದಲ್ಲಿ ಫೈಬರ್ ಇರಬೇಕು. ಸಬ್ಜಾ ಅಥವಾ ಚಿಯಾ ಬೀಜ ಅಥವಾ ಇಸಾಬ್ ಗೋಲ್ ರೂಪದಲ್ಲಿ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇವಿಸಿ
* ಕೊರತೆಗಳ ಆಧಾರದ ಮೇಲೆ ನಿರ್ದಿಷ್ಟ ಪೂರಕ ಅಂಶಗಳನ್ನು ಸೇವಿಸಿ
* ಹೊರಗೆ ತಿನ್ನುವಾಗ ಧಾನ್ಯಗಳನ್ನು ಸೇವಿಸಬೇಡಿ
* ಮನೆಯಲ್ಲಿ ಬೇಳೆ, ಕಾಳು, ತಾಜಾ ಹಣ್ಣು, ತಾಜಾ ತರಕಾರಿಗಳನ್ನು ಸೇವಿಸಿ
* ನಿತ್ಯ ಕನಿಷ್ಠ 8 ಗಂಟೆ ನಿದ್ರೆ ಮಾಡಿ
* ನಿಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ