ಬೆಂಗಳೂರು: ಅಡಿಕೆ ವ್ಯಾಪಾರಿಯ 1 ಕೋಟಿ ರೂಪಾಯಿ ಹಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಅಂತರರಾಜ್ಯ ಅಡಿಕೆ ವ್ಯಾಪಾರಿಯಾಗಿರುವ ಹೆಚ್.ಎಸ್.ಉಮೇಶ್ ಅಕ್ಟೋಬರ್ 7ರಂದು ನೀಲಿ ಬಣ್ಣದ ಬ್ಯಾಗ್ ನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿತ್ರದುರ್ಗಕ್ಕೆ ಅಡಿಕೆ ಕೊಳ್ಳಲು ಬಂದಿದ್ದರು. ಆದರೆ ಚಿತ್ರದುರ್ಗದಲ್ಲಿ ಉಮೇಶ್ ಅವರಿಗೆ ಅಡಿಕೆ ಸಿಕ್ಕಿರಲಿಲ್ಲ. ಹಾಗಾಗಿ ಅವರು ಶಿರಾದಲ್ಲಿ ಅಡಿಕೆ ಕೊಳ್ಳಲು ಮುಂದಾಗಿದ್ದರು. ಆದರೆ ಅಲ್ಲಿಯೂ ಅಡಿಕೆ ಸಿಕ್ಕಿರಲಿಲ್ಲ. ಬಳಿಕ ತುಮಕೂರಿನಲ್ಲಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇದರಿಂದ ವಾಪಾಸ್ ಆಗಿದ್ದ ಉಮೇಶ್, ಬೆಂಗಳೂರಿನ ಚಂದ್ರಾಲೇಔಟ್ ಪಿಜಿಯಲ್ಲಿದ್ದ ತನ್ನ ಹಾಗೂ ತನ್ನ ಸ್ನೇಹಿತರ ಮಕ್ಕಳನ್ನು ಭೇಟಿಯಾಗಿ ಹೋಗಲೆಂದು ಬೆಂಗಳೂರಿಗೆ ಬಂದಿದ್ದರು.
ಗಾಂಧಿನಗರದ ಹೋಟೆಲ್ ವೊಂದರ ಮುಂಭಾಗದಲ್ಲಿ ಕಾರು ನಿಲ್ಲಿಸಿ ಊಟ ಮುಗಿಸಿ ಚಂದ್ರಾಲೇಔಟ್ ಪಿಜಿಗೆ ತೆರಳಿ ಮಕ್ಕಳನ್ನು ಭೇಟಿಯಾಗಿ ತಮ್ಮೂರಾದ ಭೀಮಸಂದ್ರಕ್ಕೆ ತೆರಳಿದ್ದರು. ಊರಿಗೆ ಹೋಗಿ ಕಾರಿನ ಡಿಕ್ಕಿ ತೆರೆದು ನೋಡಿದರೆ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಚಿಂತಿತರಾಗಿದ್ದ ಉಮೇಶ್ ಹತ್ತು ದಿನಗಳ ಬಳಿಕ ಕಾರಿನ ಚಾಲಕನ ಮೇಲೆ ಅನುಮಾನಗೊಂಡು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಾರಿನ ಚಾಲಕ ಸಂತೋಷ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 1 ಕೋಟಿ ರೂಪಾಯಿ ಹಣ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಚಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ.