
ನುಸ್ರತ್ ಜಹಾನ್ ಹಾಗೂ ನಟ ಯಶ್ ದಾಸ್‌ಗುಪ್ತಾ ಜೊತೆ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಘೋಷಿಸಲು ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದ್ಯಮಿ ನಿಖಿಲ್ ಜೈನ್ ಅವರೊಂದಿಗಿನ ವಿವಾಹವು ಕಾನೂನುಬದ್ಧವಾಗಿಲ್ಲ ಎಂದು ಕೋಲ್ಕತ್ತಾ ನ್ಯಾಯಾಲಯವು ತೀರ್ಪು ನೀಡಿದ ಕೆಲವು ದಿನಗಳ ನಂತರ ಅವರು ಇನ್ಸ್ಟಾಗ್ರಾಂನಲ್ಲಿ ಕೆಲವು ಪೋಸ್ಟ್ ಹಂಚಿಕೊಂಡಿದ್ದಾರೆ.
ನುಸ್ರತ್ ಮತ್ತು ನಟ ಯಶ್ ದಾಸ್‌ಗುಪ್ತಾ ಒಟ್ಟಿಗೆ ಪೋಸ್ ನೀಡಿರುವ ಹಾಗೂ ಕ್ಲಾಪ್ ಬೋರ್ಡ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ನುಸ್ರತ್ ಕಳೆದ ವರ್ಷದಿಂದ ಯಶ್ ಜೊತೆ ಸಂಬಂಧ ಹೊಂದಿದ್ದರು. ಇಬ್ಬರು ತಮ್ಮ ಮೊದಲ ಮಗು ಯಿಶಾನ್ ನನ್ನು ಆಗಸ್ಟ್‌ನಲ್ಲಿ ಸ್ವಾಗತಿಸಿದ್ದರು. ನುಸ್ರತ್ ಅವರು ಯಶ್ ಅವರನ್ನು ಮದುವೆಯಾಗಿದ್ದಾರೆಯೇ ಎಂದು ಸ್ಪಷ್ಟವಾಗಿ ಖಚಿತಪಡಿಸದಿದ್ದರೂ, ಸುಳಿವಷ್ಟೇ ನೀಡಿದ್ದಾರೆ. ಕಳೆದ ತಿಂಗಳು ಯಶ್ ಹುಟ್ಟುಹಬ್ಬದ ಕೇಕ್‌ನಲ್ಲಿ ಗಂಡ ಮತ್ತು ಅಪ್ಪ ಎಂದು ಬರೆದಿರುವ ಚಿತ್ರಗಳನ್ನು ನುಸ್ರತ್ ಹಂಚಿಕೊಂಡಿದ್ದರು.
ಈ ವಾರದ ಆರಂಭದಲ್ಲಿ, ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯವು ನುಸ್ರತ್ ಮತ್ತು ನಿಖಿಲ್ ಅವರ ವಿವಾಹವು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ ಎಂದು ಹೇಳಿತ್ತು. ಇವರಿಬ್ಬರೂ 2019 ರಲ್ಲಿ ಟರ್ಕಿಯಲ್ಲಿ ಮದುವೆಯಾಗಿದ್ದರು. ಆದರೆ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ಅಂತರ್ಧರ್ಮೀಯ ವಿವಾಹವನ್ನು ನೋಂದಾಯಿಸಲಿಲ್ಲ. ಆದ್ದರಿಂದ ಇದನ್ನು ಮದುವೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿತ್ತು.