ಲಖನೌ: ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ 59 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಭದೋಹಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಆರೋಪಿ ಚಿಂತಾಮಣಿ ಶರ್ಮಾನನ್ನು ಬಂಧಿಸಲಾಗಿದೆ. ಭದೋಹಿ ಆರೋಗ್ಯ ಇಲಾಖೆ ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಚಿಂತಾಮಣಿ ಶರ್ಮಾ ಎಂಬಾತ ನರ್ಸ್ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದಾನೆ.
ನರ್ಸ್ 15 ವರ್ಷದವಳಾಗಿದ್ದಾಗ ಅವಳು ವಾಸವಾಗಿದ್ದ ಅಪಾರ್ಟ್ ಮೆಂಟ್ ನಲ್ಲಿಯೇ ಚಿಂತಾಮಣಿ ಶರ್ಮಾ ಕೂಡ ವಾಸವಾಗಿದ್ದ. ಹೀಗಾಗಿ ಪರಿಚಯನಾದ ಶರ್ಮಾ, ಬಳಿಕ ಯುವತಿಯ ಅಧ್ಯಯನಕ್ಕೆ ಸಹಾಯ ಮಾಡುವುದಾಗಿ ಹೇಳಿ ಆಕೆಯ ಕುಟುಂಬಕ್ಕೂ ಹತ್ತಿರವಾಗಿದ್ದ. ಸಮಯ ಕಳೆದಂತೆ ಆಕೆಯನ್ನೇ ವಿವಾಹವಾಗುವುದಾಗಿ ಹೇಳಿ ನಂಬಿಸಿದ್ದ. ಬಳಿಕ ಬೆದರಿಕೆ ಹಾಕಿ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹಲವು ವರ್ಷಗಳ ಕಾಲ ಇದೇ ರೀತಿ ಮುಂದುವರೆಸಿದ್ದ ಶರ್ಮಾ ಈ ವೇಳೆ ಬೇರೊಬ್ಬಳ ಜೊತೆ ರಹಸ್ಯವಾಗಿ ವಿವಾಹವಾಗಿದ್ದಾನೆ. ಅಲ್ಲದೇ ಇತ್ತ ನರ್ಸ್ ಜೊತೆಯೂ ದೈಹಿಕ ಸಂಪರ್ಕ ಮುಂದುವರೆಸಿದ್ದ. ಶರ್ಮಾ ಮದುವೆ ನಿರಾಕರಿಸುತ್ತಾ, ಮೋಸ ಮಾಡುತ್ತಿರುವ ಬಗ್ಗೆ ನರ್ಸ್ ದೂರು ದಾಖಲಿಸಿದ್ದು, ವಾರಣಾಸಿಯ ಅಪಾರ್ಟ್ ಮೆಂಟ್ ನಿಂದ ಆರೋಪಿಯನ್ನು ಬಂಧಿಸಲಾಗಿದೆ.
ನರ್ಸ್ ಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಭದೋಹಿ ಎಸ್ ಪಿ ಮೀನಾಕ್ಷಿ ಕಾತ್ಯಾಯನ್ ತಿಳಿಸಿದ್ದಾರೆ.