ಕೋಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆ ಮಾಸುವ ಮೊದಲೇ ಬಂಗಾಳದ ಆಸ್ಪತ್ರೆಯೊಂದರಲ್ಲಿ ನರ್ಸ್ ಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ಬಿರ್ಭಮ್ ನ ಇಲಂಬಜಾರ್ ಆರೋಗ್ಯ ಕೇಂದ್ರದ ನರ್ಸ್ ಕರ್ತವ್ಯದಲ್ಲಿರುವಾಗ ರೋಗಿಯೊಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಗಿದ್ದ ಆರೋಪಿ, ಸಲೈನ್ ಹಾಕುವ ವೇಳೆ ನರ್ಸ್ ಗೆ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎನ್ನಲಾಗಿದೆ.
ತುರ್ತು ಚಿಕಿತ್ಸಾ ವಿಭಾಗದಲ್ಲಿ ತನಗೆ ಚಿಕಿತ್ಸೆ ನೀಡುತ್ತಿದ್ದಾಗ ರೋಗಿಯು ಕಿರುಕುಳ ನೀಡಿದ್ದಾನೆ ಎಂದು ನರ್ಸ್ ಆರೋಪಿಸಿದ್ದಾರೆ. ಘಟನೆ ವೇಳೆ ಆರೋಪಿ ಕುಟುಂಬಸ್ಥರು ಜೊತೆಗಿದ್ದರು.
ನಾನು ವೈದ್ಯರ ಸೂಚನೆಗಳನ್ನು ಅನುಸರಿಸುತ್ತಿರುವಾಗ ಪುರುಷ ರೋಗಿಯು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಖಾಸಗಿ ಭಾಗಗಳಲ್ಲಿ ಅನುಚಿತವಾಗಿ ಸ್ಪರ್ಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ನರ್ಸ್ ದೂರಿದ್ದಾರೆ.
ಘಟನೆಯಿಂದ ಆರೋಗ್ಯ ಕೇಂದ್ರದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಆಸ್ಪತ್ರೆ ಅಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ರೋಗಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆ ಶವ ಪತ್ತೆಯಾದ ವಾರಗಳ ನಂತರ ಈ ಘಟನೆ ನಡೆದಿದೆ.