ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಹಿಂದೆ ಕಬ್ಬಿಣದ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿ ಮೃತಪಟ್ಟ ಒಂದು ದಿನದ ಮೊದಲು ಅವಳು ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು ಎಂದು ವರದಿಯಾಗಿದೆ.
ದುಲ್ಲಾಪುರ ಗ್ರಾಮದ ನ್ಯೂ ಜೀವನ್ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ವರದಿಯಾಗಿದೆ. ಮೃತರನ್ನು ಟಿಕಾನಾ ಗ್ರಾಮದ ನಿವಾಸಿ ನಾಜಿಯಾ(19) ಎಂದು ಗುರುತಿಸಲಾಗಿದೆ. ಶುಕ್ರವಾರ ಆಸ್ಪತ್ರೆಗೆ ದಾದಿಯಾಗಿ ಕೆಲಸ ಮಾಡಲು ಬಂದಿದ್ದರು.
ಮರುದಿನ ಆಸ್ಪತ್ರೆಯ ಸಿಬ್ಬಂದಿ ನಾಜಿಯಾ ಮೃತದೇಹ ಪತ್ತೆ ಮಾಡಿದ್ದಾರೆ, ಹೊಸದಾಗಿ ತೆರೆಯಲಾದ ವೈದ್ಯಕೀಯ ಸೌಲಭ್ಯದ ಹಿಂಭಾಗದ ಗೋಡೆಯಿಂದ ಹೊರಬಂದ ಕಬ್ಬಿಣದ ಬಾರ್ ನಿಂದ ನೇತಾಡುತ್ತಿದ್ದರು. ಅವಳ ಕುತ್ತಿಗೆಗೆ ಕುಣಿಕೆ ಇತ್ತು, ಅವಳ ಮುಖದ ಮೇಲೆ ಮಾಸ್ಕ್ ಇತ್ತು, ಕೈಯಲ್ಲಿ ಕರವಸ್ತ್ರದಂತಹ ಬಟ್ಟೆ ಕೂಡ ಇತ್ತು,
ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶುಕ್ರವಾರ ರಾತ್ರಿ ನಾಜಿಯಾ ಆಸ್ಪತ್ರೆಯೊಳಗೆ ಮಲಗಿದ್ದರು ಎಂದು ನೌಕರರು ಪೊಲೀಸರಿಗೆ ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಆಕೆಯ ಶವ ಪತ್ತೆಯಾಗಿದೆ.
ಆಕೆಯನ್ನು ಕೊಲೆಗೈದು ಶವವನ್ನು ಆಸ್ಪತ್ರೆಯ ಹಿಂದೆ ನೇಣು ಹಾಕಲಾಗಿದೆ ಎಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ನಾಜಿಯಾಳ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಾಲ್ವರ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ನ್ಯೂ ಜೀವನ್ ಆಸ್ಪತ್ರೆಯನ್ನು ಬಂಗಾರಮೌ ಶಾಸಕ ಶ್ರೀಕಾಂತ್ ಕಟಿಯಾರ್ ಅವರು ಏಪ್ರಿಲ್ 25 ರಂದು ಉದ್ಘಾಟಿಸಿದ್ದರು.