ಗುಜರಾತಿಗಳು ಭಾರತೀಯ ಪಾಸ್‌ಪೋರ್ಟ್ ತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. 2021 ರಿಂದ ಇಲ್ಲಿಯವರೆಗೆ 1187 ಗುಜರಾತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಗುಜರಾತಿಗಳಿಗೆ ಕೆನಡಾ ಮೊದಲ ಆಯ್ಕೆಯಾಗುತ್ತಿದೆ. ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋದ ಅನೇಕ ಗುಜರಾತಿಗಳು ಅಲ್ಲೇ ನೆಲೆಸಿದ್ದಾರೆ.
ಗುಜರಾತಿನ ಯುವಕರಿಗೆ ವಿದೇಶಿ ವ್ಯಾಮೋಹ!
ಗುಜರಾತ್ ಯುವಕರು ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಕೆನಡಾದ ಪೌರತ್ವ ಪಡೆದು ನಂತರ ಭಾರತೀಯ ಪೌರತ್ವವನ್ನು ತ್ಯಜಿಸಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಕೆನಡಾದ ಪೌರತ್ವ ಪಡೆದ ನಂತರ ಅನೇಕ ಗುಜರಾತಿಗಳು ತಮ್ಮ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಮರಳಿಸಿದ್ದಾರೆ.
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮಾಹಿತಿಯ ಪ್ರಕಾರ 2023 ರಲ್ಲಿ 485 ಪಾಸ್‌ಪೋರ್ಟ್‌ಗಳನ್ನು ಸರೆಂಡರ್ ಮಾಡಲಾಗಿದೆ. 2022ಕ್ಕೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ. ಇವರಲ್ಲಿ ಹೆಚ್ಚಿನವರು 30 ರಿಂದ 45 ವರ್ಷದವರು. ಭಾರತದ ಪೌರತ್ವ ತ್ಯಜಿಸಿ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
2014 ಮತ್ತು 2022ರ ನಡುವೆ 22,300 ಗುಜರಾತಿಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಸಂಖ್ಯೆ ದೆಹಲಿಯಲ್ಲಿ 60,414 ಮತ್ತು ಪಂಜಾಬ್‌ನಲ್ಲಿ 28,117 ಇದೆ. ಕೋವಿಡ್ ನಂತರ ಪಾಸ್‌ಪೋರ್ಟ್ ಮರಳಿಸುವವರ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾರಣ ರಾಯಭಾರ ಕಚೇರಿಗಳ ಪುನರಾರಂಭ ಮತ್ತು ಪೌರತ್ವ ಪ್ರಕ್ರಿಯೆಗಳ ಪ್ರಾರಂಭ.
ಹೆಚ್ಚಿನ ವಿದ್ಯಾಭ್ಯಾಸ ಮತ್ತು ಐಷಾರಾಮಿ ಬದುಕನ್ನು ಅರಸಿಕೊಂಡು ವಿದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಉತ್ತಮ ಮೂಲಸೌಕರ್ಯ ಮತ್ತು ಐಷಾರಾಮಿ ಜೀವನಕ್ಕಾಗಿ ಉದ್ಯಮಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ. ಭಾರತದಲ್ಲಿ ಉತ್ತಮ ಜೀವನಮಟ್ಟ ಹೊಂದಿರುವವರು ಕೂಡ ಮಾಲಿನ್ಯ, ಹದಗೆಟ್ಟ ರಸ್ತೆಗಳಂತಹ ಸಮಸ್ಯೆಗಳಿಂದ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗ್ತಿದೆ. 2012 ರಿಂದೀಚೆಗೆ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಿದೇಶದಲ್ಲಿ ನೆಲೆಸಿರುವವರು ಈಗ ಅಲ್ಲಿನ ಪೌರತ್ವವನ್ನು ಪಡೆದುಕೊಳ್ಳುತ್ತಿದ್ದಾರೆ.