ಅಮರಾವತಿ: ಹೊಸದಾಗಿ ಅಧಿಕಾರಕ್ಕೆ ಬಂದಿರುವ ಆಂಧ್ರಪ್ರದೇಶ ಸರ್ಕಾರವು ಎನ್‌ಟಿಆರ್ ಭರೋಸಾ ಪಿಂಚಣಿ ಯೋಜನೆಯಡಿ ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 3,000 ರೂ.ನಿಂದ 4,000 ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದೆ.
ಇದನ್ನು ಹಿಂದೆ ವೈಎಸ್‌ಆರ್ ಪಿಂಚಣಿ ಕನುಕಾ ಯೋಜನೆ ಎಂದು ಕರೆಯಲಾಗುತ್ತಿತ್ತು. ಫಲಾನುಭವಿಗಳು ಮೇ ತಿಂಗಳಿನಿಂದಲೇ ಅನ್ವಯವಾಗುವಂತೆ ಪಿಂಚಣಿ ಹೆಚ್ಚಳ ಪ್ರಯೋಜನ ಪಡೆಯಲಿದ್ದಾರೆ ಎಂದು ಆಂಧ್ರಪ್ರದೇಶ ದತ್ತಿ ಸಚಿವ ಆನಂ ರಾಮನಾರಾಯಣ ರೆಡ್ಡಿ ತಿಳಿಸಿದ್ದಾರೆ.
ತಮ್ಮ ಸರ್ಕಾರದ ಎನ್‌ಟಿಆರ್ ಭರೋಸಾ ಪಿಂಚಣಿ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 3,000 ರೂ.ನಿಂದ 4,000 ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ(BPL) ಹಿರಿಯ ನಾಗರಿಕರು, ವಿಧವೆಯರು, ನೇಕಾರರು, ಟೋಡಿ ಟ್ಯಾಪರ್ಸ್, ಮೀನುಗಾರರು, ಒಂಟಿ ಮಹಿಳೆಯರು, ಸಾಂಪ್ರದಾಯಿಕ ಚಮ್ಮಾರರು ಮತ್ತು ಕುಶಲಕರ್ಮಿಗಳನ್ನು ಒಳಗೊಂಡಿರುವ ಈ ಫಲಾನುಭವಿಗಳು ಎನ್‌ಟಿಆರ್ ಭರೋಸಾ ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ. ಅರ್ಜಿದಾರರು ಆದಾಯದ ಪುರಾವೆಯಾಗಿ ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ನಿವಾಸದ ಪುರಾವೆಗಾಗಿ ಇತರ ಅಧಿಕೃತ ದಾಖಲೆ ಒದಗಿಸಬೇಕು.
ಅಧಿಕಾರಕ್ಕೆ ಬಂದ ಮೊದಲ ತಿಂಗಳಲ್ಲೇ ಪಿಂಚಣಿ ಹೆಚ್ಚಿಸುವ ಪ್ರಮುಖ ಭರವಸೆಯನ್ನು ಮುಖ್ಯಮಂತ್ರಿ ನಾಯ್ಡು ಈಡೇರಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆಯ ಆಧಾರದ ಮೇಲೆ ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು, ಮೀನುಗಾರರು ಮತ್ತು ಕುಶಲಕರ್ಮಿಗಳಿಗೆ ಪಿಂಚಣಿ ಹೆಚ್ಚಿಸಲಾಗಿದೆ ಎಂದು ರಾಮ ನಾರಾಯಣ ರೆಡ್ಡಿ ತಿಳಿಸಿದ್ದಾರೆ.
ಕ್ಷಯರೋಗದಿಂದ(ಟಿಬಿ) ಪೀಡಿತ ವ್ಯಕ್ತಿಗಳು ಮತ್ತು ವಿಕಲಚೇತನರ ಪಿಂಚಣಿ ಮೊತ್ತವನ್ನು ಮಾಸಿಕ 3,000 ರೂ.ನಿಂದ 6,000 ರೂ.ಗೆ ಹೆಚ್ಚಿಸಲಾಗಿದೆ. ಇದಲ್ಲದೆ, ಸಂಪೂರ್ಣ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಈಗ ಮಾಸಿಕ 5,000 ರೂ.ಗಳಿಗೆ ಹೋಲಿಸಿದರೆ 15,000 ರೂ.ಗಳ ಹೆಚ್ಚಿನ ಪಿಂಚಣಿಯನ್ನು ಪಡೆಯುತ್ತಾರೆ. ಇದಲ್ಲದೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು 5,000 ರೂ.ಗೆ ಬದಲಾಗಿ ತಿಂಗಳಿಗೆ 10,000 ರೂ. ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.