ನವದೆಹಲಿ: ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಕೋವಿಡ್-19 ಲಸಿಕೆ ಕೋವಿಶೀಲ್ಡ್ ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ ನಂತರ 8 ರಿಂದ 16 ವಾರಗಳ ನಡುವೆ ನೀಡಬಹುದು ಎಂದು ಎನ್.ಟಿ.ಎ.ಜಿ.ಐ. ಪ್ರತಿರಕ್ಷಣೆಯ ಮೇಲಿನ ಭಾರತದ ಅಪೆಕ್ಸ್ ಬಾಡಿ ಶಿಫಾರಸು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ಮೂಲಗಳನ್ನು ಉಲ್ಲೇಖಿಸಿ, ಜಾಗತಿಕ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ(ಎನ್.ಟಿ.ಎ.ಜಿ.ಐ.) ಇತ್ತೀಚಿನ ಶಿಫಾರಸುಗಳು ಪ್ರೋಗ್ರಾಮ್ಯಾಟಿಕ್ ಡೇಟಾದಿಂದ ಪಡೆದ ಇತ್ತೀಚಿನ ಜಾಗತಿಕ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆ ಎಂದು ಮೂಲವೊಂದು ಉಲ್ಲೇಖಿಸಿದೆ.
ಅದರ ಪ್ರಕಾರ, ಕೋವಿಶೀಲ್ಡ್ ಎರಡನೇ ಡೋಸ್ ಅನ್ನು ಎಂಟು ವಾರಗಳ ನಂತರ ನೀಡಿದಾಗ, 12 ರಿಂದ 16 ವಾರಗಳ ಮಧ್ಯಂತರದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ ಪ್ರತಿಕ್ರಿಯೆಯು ಬಹುತೇಕ ಹೋಲುತ್ತದೆ.
ಪ್ರಸ್ತುತ, ಕೋವಿಶೀಲ್ಡ್‌ನ ಎರಡನೇ ಡೋಸ್ ಅನ್ನು ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ ಮೊದಲ ಡೋಸ್ ನಂತರ 12-16 ವಾರಗಳ ನಡುವೆ ನೀಡಲಾಗುತ್ತದೆ.
ಎರಡು ಡೋಸ್ ಗಳ ನಡುವಿನ ಕಡಿಮೆ ಅವಧಿಯ ನಿರ್ಧಾರದಿಂದ ಉಳಿದ ಆರರಿಂದ ಏಳು ಕೋಟಿ ವ್ಯಕ್ತಿಗಳಿಗೆ ಕೋವಿಶೀಲ್ಡ್ ಎರಡನೇ ಡೋಸ್ ಬೇಗನೆ ನೀಡಬಹುದಾಗಿದೆ.
NTAGI ಭಾರತ್ ಬಯೋಟೆಕ್ ನ ಕೋವಾಕ್ಸಿನ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಇನ್ನೂ ಸೂಚಿಸಿಲ್ಲ, ಅದರ ಮೊದಲ ಡೋಸ್ ನಂತರ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ.
ಎನ್.ಟಿ.ಎ.ಜಿ.ಐ. ಶಿಫಾರಸುಗಳ ಆಧಾರದ ಮೇಲೆ ಸರ್ಕಾರ 13 ಮೇ, 2021 ರಂದು ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಗಳ ನಡುವಿನ ಅಂತರವನ್ನು ಆರರಿಂದ ಎಂಟು ವಾರಗಳಿಂದ 12-16 ವಾರಗಳಿಗೆ ವಿಸ್ತರಿಸಿದೆ.
NTAGI ದೇಶದಲ್ಲಿ ಲಸಿಕೆ ತಡೆಗಟ್ಟಬಹುದಾದ ರೋಗಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಪ್ರತಿರಕ್ಷಣೆ ಸೇವೆಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾರ್ಗದರ್ಶನ ಮತ್ತು ಸಲಹೆ ಒದಗಿಸುತ್ತದೆ.
ಕೋವಿಶೀಲ್ಡ್ ಉತ್ಪಾದಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಕಳೆದ ತಿಂಗಳು ಎರಡನೇ ಕೋವಿಡ್ ಡೋಸ್ ಮತ್ತು ಮೂರನೇ ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರವನ್ನು ಮೂರು ತಿಂಗಳಿಗೆ ಕಡಿಮೆ ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಕೇಳಿಕೊಂಡಿತ್ತು.