ಮಾರುಕಟ್ಟೆ ನಿಯಂತ್ರಕವು ನಡೆಸಿದ ತನಿಖೆಯೊಂದರಲ್ಲಿ ದೇಶದ ಅತೀ ದೊಡ್ಡ ಸ್ಟಾಕ್ ಎಕ್ಸ್ಚೇಂಜ್ನ ಮಾಜಿ ಮುಖ್ಯಸ್ಥರೊಬ್ಬರು ನಿರ್ಣಾಯಕ ನಿರ್ಧಾರಗಳ ಕುರಿತಂತೆ ಸಲಹೆಯನ್ನು ಪಡೆದುಕೊಳ್ಳಲು ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸ್ಟಾಕ್ ಎಕ್ಸ್ಚೇಂಜ್ನ ನಿಯಮಾವಳಿಗಳ ಪ್ರಕಾರ ಇದೊಂದು ವಿಲಕ್ಷಣ ದುರ್ನಡತೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಾಹಕ ಚಿತ್ರಾ ರಾಮಕೃಷ್ಣ ಅವರು ಮಾರುಕಟ್ಟೆಯ ವ್ಯವಹಾರ ಯೋಜನೆಗಳು, ಹಣಕಾಸು ಪ್ರಕ್ಷೇಪಗಳು ಮತ್ತು ಮಂಡಳಿಯ ಕಾರ್ಯಸೂಚಿ ಸೇರಿದಂತೆ ಮಹತ್ವದ ಮಾಹಿತಿಯನ್ನು ಹಿಮಾಲಯದಲ್ಲಿರುವ ಆಧ್ಯಾತ್ಮಿಕ ಗುರುಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸೆಬಿ ತಿಳಿಸಿದೆ.
ಈ ಸಂಬಂಧ SEBI ನೀಡಿರುವ ಆದೇಶದಲ್ಲಿ, NSE ಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದು ಊಹಿಸಲೂ ಅಸಾಧ್ಯವಾದ ಹಾಗೂ ಸ್ಟಾಕ್ ಎಕ್ಸ್ಚೇಂಜ್ನ ಬುಡವನ್ನೇ ಅಲುಗಾಡಿಸುವ ಒಂದು ಕಾರ್ಯವಾಗಿದೆ ಎಂದು ಹೇಳಿದೆ.
ನಿರ್ಣಾಯಕ ನಿರ್ಧಾರಗಳನ್ನು ಯೋಗಿಯೇ ತೆಗೆದುಕೊಳ್ಳುತ್ತಿದ್ದರು ಹಾಗೂ ಚಿತ್ರಾ ರಾಮಕೃಷ್ಣ ಅವರ ಕೈಗೊಂಬೆಯಾಗಿದ್ದರು ಎಂದು ಸೆಬಿ ಹೇಳಿದೆ. 2016ರಲ್ಲಿ ಅವರು ವೈಯಕ್ತಿಕ ಕಾರಣಗಳಿಂದ ಎನ್ಎಸ್ಇಯನ್ನು ತೊರೆದಿದ್ದರು.