alex Certify ನರೇಗಾ ಯೋಜನೆ : ಕೂಲಿಕಾರರಿಗೆ ಕೆಲಸ ಒದಗಿಸುವಲ್ಲಿ ರಾಜ್ಯಕ್ಕೆ ಬೆಳಗಾವಿ ಜಿಲ್ಲೆ ಫಸ್ಟ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರೇಗಾ ಯೋಜನೆ : ಕೂಲಿಕಾರರಿಗೆ ಕೆಲಸ ಒದಗಿಸುವಲ್ಲಿ ರಾಜ್ಯಕ್ಕೆ ಬೆಳಗಾವಿ ಜಿಲ್ಲೆ ಫಸ್ಟ್!

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಮಾನವ ದಿನ ಸೃಜನೆಯಲ್ಲಿ ಬೆಳಗಾವಿ ಜಿಲ್ಲೆಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಈ ಸಾಲಿನ ಆರ್ಥಿಕ ವರ್ಷದ  ಕೇವಲ ಮೂರು ತಿಂಗಳಲ್ಲಿ 61.41 ಲಕ್ಷದಷ್ಟು ಮಾನವ ದಿನ ಸೃಜನೆ ಮಾಡಿರುವುದು ದಾಖಲೆಯಾಗಿದೆ ಎಂದು ಬೆಳಗಾವಿ ಜಿಪಂ ಸಿಇಒ ಹರ್ಷಲ್ ಭೊಯರ್ ಅವರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಗೆ 2023-24ನೇ ಸಾಲಿಗೆ 1.40 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ. ಅದರ ಪೈಕಿ ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಲಾಗಿದೆ. ಮುಖ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಸತತ ಪ್ರತಿದಿನ ಒಂದು ಲಕ್ಷಕ್ಕೂ ಮೇಲ್ಪಟ್ಟು ಕೂಲಿಕಾರರು ಕೆಲಸ ನಿರ್ವಹಿಸಿರುವುದು ವಿಶೇಷ. ಕಳೆದ ಸಾಲಿನ ಆರ್ಥಿಕ ವರ್ಷದ ಮೊದಲ ಈ ಮೂರು ತಿಂಗಳಲ್ಲಿ 42.67 ಲಕ್ಷ ಮಾನವ ದಿನಗಳ ಸೃಜನೆಯಾಗಿತ್ತು. ಆದರೆ ಈ ಬಾರಿ 61.41 ಲಕ್ಷ  ಮಾನವ ದಿನ ಸೃಜನೆಯಾಗಿದ್ದು ನಿರೀಕ್ಷೆಗೂ ಮೀರಿ ಸಾಧನೆಯಾಗಿದೆ. ಕಳೆದ ವರ್ಷಕ್ಕೂ ಪ್ರಸ್ತುತ ವರ್ಷಕ್ಕೂ 18.73 ಲಕ್ಷ ಮಾನವ ದಿನ ಸೃಜನೆ ಮಾಡುವುದರೊಂದಿಗೆ ಶೇ 43.91 ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ.

ಮಾನವ ದಿನ ಸೃಜನೆಯಲ್ಲಿ ಮೊದಲ ಐದು ಸ್ಥಾನದಲ್ಲಿರುವ ಜಿಲ್ಲಾವಾರು ಮಾಹಿತಿ

ಕ್ರ.ಸಂ. ಜಿಲ್ಲೆ ಮಾನವ ದಿನಗಳ ಸೃಜನೆ (ಲಕ್ಷಗಳಲ್ಲಿ)

1 ಬೆಳಗಾವಿ 61.41

2 ರಾಯಚೂರು 58.75

3 ಕೊಪ್ಪಳ 57.37

4 ಬಳ್ಳಾರಿ 49.19

5 ವಿಜಯನಗರ 42.51

ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನದ ಸೃಜನೆಯ ಸಾಧನೆ: ಬೆಳಗಾವಿ ಜಿಲ್ಲೆಯು ನರೇಗಾ ಯೋಜನೆಯಡಿ ಪ್ರಪ್ರಥಮ ಬಾರಿಗೆ ದಿನಾಂಕ: 01-07-2023 ರಂದು ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿರುವುದು ರಾಜ್ಯದಲ್ಲಿಯೇ ಇಲ್ಲಿಯವರೆಗೆ ಗರಿಷ್ಠ ಸಾಧನೆಯಾಗಿದೆ.

ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.58.66: ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಒದಗಿಸಲಾಗಿದ್ದು, ಸನ್ 2022-23 ನೇ ಸಾಲಿನಲ್ಲಿ 54.40% ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.58.66 ರಷ್ಟು ಮಹಿಳೆಯರು ಮನರೇಗಾದಡಿ ಉದ್ಯೋಗ ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಕೇವಲ 3 ತಿಂಗಳಲ್ಲಿ ಶೇ.4.24 ರಷ್ಟು ಮಹಿಳೆಯರ ಭಾಗವಹಿಸುವಿಕೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಜನರಿಗೆ ಮನರೇಗಾ ಯೋಜನೆಯ ಕುರಿತು ಮನೆ ಮನೆ ಭೇಟಿ, ಸ್ವಸಹಾಯ ಸಂಘದ LCRP, MBK, ಕೃಷಿ ಸಖಿ ಹಾಗೂ ಪಶು ಸಖಿರವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ತಾಲ್ಲೂಕಾ ಮಟ್ಟದಲ್ಲಿ ತಾಲ್ಲೂಕಾ ಐ.ಇ.ಸಿ ಸಂಯೋಜಕರು ಹಾಗೂ ಆಡಳಿತ ಸಹಾಯಕರು ಗ್ರಾಮ ಪಂಚಾಯತಿ ಹಾಗೂ ಕಾಮಗಾರಿ ಸ್ಥಳಗಳಿಗೆ ನಿರಂತರ ಭೇಟಿ ಹಾಗೂ ಪರಿಶೀಲನೆ ಕಾರ್ಯ ಜರುಗಿಸಿರುವುದರಿಂದ ಜನರಿಗೆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಲುಪಿಸಲು ಅನುಕೂಲವಾಗಿದೆ.

ಜಿಲ್ಲೆಯಾದ್ಯಂತ ನರೇಗಾದಡಿ ಅಧಿಕ ಪ್ರಮಾಣದಲ್ಲಿ ಜನರು ಕೂಲಿ ಕೆಲಸ ಪಡೆದು ರಾಜ್ಯದಲ್ಲಿಯೇ ಅತಿ ಹೆಚ್ಚು ಮಾನವ ದಿನ ಸೃಜನೆ ಮಾಡಿದ್ದು ಸಂತಸದ ವಿಷಯವಾಗಿದ್ದು. ಜಿಲ್ಲೆಯ ಎಲ್ಲ ತಾಲ್ಲೂಕಿನ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿ/ಸಿಬ್ಬಂದಿಯವರ ಶ್ರಮ ಹಾಗೂ ಸಹಕಾರದಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ.  ಅದೇರೀತಿ ವಿಶೇಷ ಚೇತನರು, ಹಿರಿಯನಾಗರಿಕರು ಮತ್ತು ಮಹಿಳೆಯರು ಇನ್ನು ಹೆಚ್ಚೆಚ್ಚು ಯೋಜನೆಯಡಿ ಭಾಗಿಯಾಗಿ ಮನರೇಗಾ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...