ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಲಾಕ್ಡೌನ್ ಕಾರಣದಿಂದಾಗಿ ಅನೇಕರು ಹಳ್ಳಿಗೆ ಮರಳಿದ್ದಾರೆ. ಬಹುತೇಕರು ಉದ್ಯೋಗಖಾತ್ರಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಸೂಚನೆ ನೀಡಲಾಗಿದೆ.
ಕೆಲಸದ ಸ್ಥಳದಲ್ಲಿ ವೈದ್ಯಕೀಯ ಮತ್ತು ಮೂಲ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಖರೀದಿಸಬೇಕು ಎಂದು ತಿಳಿಸಲಾಗಿದೆ.
ಕೂಲಿಕಾರ್ಮಿಕರಲ್ಲಿ ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ತಿಳಿಸಬೇಕು. ಲಕ್ಷಣ ಇರುವವರ ಪರೀಕ್ಷೆಗೊಳಪಡಿಸಿ ಐಸೋಲೇಷನ್ ನಲ್ಲಿ ಇಡಬೇಕು. ಕಾಮಗಾರಿ ಸ್ಥಳದಲ್ಲಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಬೇಸಿಗೆ ದಿನಗಳಲ್ಲಿ ತಾಪಮಾನ ಅಧಿಕವಾಗಿ ಆರೋಗ್ಯ ತೊಂದರೆ ಕಾಣಿಸಿಕೊಳ್ಳಬಹುದು. ಹೀಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು. ಒ.ಆರ್.ಎಸ್., ಆಸ್ಪಿರಿನ್ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಇಟ್ಟಿರಬೇಕು. ಕೂಲಿ ಕಾರ್ಮಿಕರ ಚಿಕಿತ್ಸೆ ವೆಚ್ಚವನ್ನು ನರೇಗಾ ಆಡಳಿತಾತ್ಮಕ ವೆಚ್ಚದಲ್ಲಿ ಭರಿಸಬೇಕು ಎಂದು ಹೇಳಲಾಗಿದೆ.