ನವದೆಹಲಿ: ಹೊಸ ಪಿಂಚಣಿ ವ್ಯವಸ್ಥೆ(NPS) ಸುಧಾರಿಸಲು ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಹಣಕಾಸು ಮಸೂದೆ 2023 ಕ್ಕೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊಸ ಪಿಂಚಣಿ ವ್ಯವಸ್ಥೆ ಹೊಸ ವಿಧಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ರೂಪಿಸಲಾಗುತ್ತದೆ.
ಪಿಂಚಣಿಗಳ ಸಮಸ್ಯೆ ಪರಿಶೀಲಿಸಲು, ಸಾಮಾನ್ಯ ನಾಗರಿಕರ ರಕ್ಷಿಸುವ ಉದ್ದೇಶದಿಂದ ಹೊಸ ವಿಧಾನ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯೇತರ ಸರ್ಕಾರಗಳಿರುವ ಅನೇಕ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೆಲವು ರಾಜ್ಯಗಳಲ್ಲಿ ನೌಕರರ ಸಂಘಗಳು ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿವೆ. ಛತ್ತೀಸ್ಗಡ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ, ಜಾರ್ಖಂಡ್ ಸರ್ಕಾರಗಳು ಹಳೆ ಪಿಂಚಣಿ ಯೋಜನೆಗೆ ಮರಳುವುದಾಗಿ ಕೇಂದ್ರ ಸರ್ಕಾರಕ್ಕೆ ನಿರ್ಧಾರ ತಿಳಿಸಿವೆ.