ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಹೆಸರನ್ನು ಕೋವಿಡ್ ಪರೀಕ್ಷಾ ವರದಿಯ ಲಿಸ್ಟ್ನಲ್ಲಿ ಸೇರಿಸಿದ್ದ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬಿಹಾರದ ಮತ್ತೊಂದು ಜಿಲ್ಲೆಯಾದ ಗಯಾ ಎಂಬಲ್ಲಿ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಹೇಮಂತ್ ಸೋರೇನ್ ಹಾಗೂ ಆರೋಗ್ಯ ಸಚಿವ ಮಂಗಲ್ ಪಾಂಡೆ ಸೇರಿದಂತೆ ಅನೇಕ ಗಣ್ಯರ ಹೆಸರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ..!
ಇಲಾಖೆಯ ಹೆಸರಿಗೆ ಮಸಿ ಬಳಿಯಲು ಕೆಲವು ವ್ಯಕ್ತಿಗಳು ಈ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಬಿಹಾರ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ದೂರಿದ್ದಾರೆ. ಈ ಹೆಸರುಗಳು ಪತ್ತೆಯಾದ ಬಳಿಕ ಗಯಾ ಸಿವಿಲ್ ಸರ್ಜನ್ ಡಾ. ಅರವಿಂದ ಕುಮಾರ್ ನೀಡಿದ ಲಿಖಿತ ದೂರನ್ನು ಆಧರಿಸಿ ಟೇಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಡಾ. ಅರವಿಂದ ಕುಮಾರ್, ಗಯಾದ ಟೇಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಪುರ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರ ಪಟ್ಟಿಯಲ್ಲಿ ಕೆಲವು ರಾಜಕಾರಣಿಗಳ ಹೆಸರನ್ನು ಸೇರಿಸಲಾಗಿದೆ. ಈ ಘಟನೆ ಸಂಬಂಧ ಮೂವರು ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ರು.