ಮದ್ಯದ ಬಾಟಲಿಗಳ ಮೇಲಿರುವ ಎಂಆರ್ಪಿಗಿಂತ ಹೆಚ್ಚಿನ ದರವನ್ನು ನಿಗದಿ ಮಾಡೋದು ನಮ್ಮ ದೇಶದಲ್ಲಿ ಹೊಸತೇನಲ್ಲ. ಆದರೆ ಈ ಕೆಲಸವನ್ನು ಮಧ್ಯಪ್ರದೇಶದಲ್ಲಿ ಇನ್ಮುಂದೆ ಮಾಡಂಗಿಲ್ಲ. ಏಕೆಂದರೆ ಈ ವ್ಯವಸ್ಥೆಯನ್ನು ಬಂದ್ ಮಾಡಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದೆ.
ಮಧ್ಯಪ್ರದೇಶ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 3300ಕ್ಕೂ ಅಧಿಕ ಮದ್ಯದ ಅಂಗಡಿಗಳಿವೆ. ಸೆಪ್ಟೆಂಬರ್ 1ನೇ ತಾರೀಖಿನಿಂದ ಅನ್ವಯವಾಗುವಂತೆ ದೇಶಿ ಅಥವಾ ವಿದೇಶಿ ಮದ್ಯ ಖರೀದಿ ಮಾಡಿದ ಗ್ರಾಹಕರಿಗೆ ಅಂಗಡಿಗಳು ರಶೀದಿ ನೀಡಲೇಬೇಕು. ಈ ನಿಯಮವನ್ನು ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಅಬಕಾರಿ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ನಕಲಿ ರಶೀದಿ ಪುಸ್ತಕ ತಯಾರು ಮಾಡುವ ಮದ್ಯದಂಗಡಿಗಳಿಗೂ ಲಗಾಮು ಹಾಕಿರುವ ಮಧ್ಯ ಪ್ರದೇಶ ಸರ್ಕಾರ ಇದಕ್ಕೆಂದೇ ಅಧಿಕೃತ ರಶೀದಿ ಪುಸ್ತಕವನ್ನೂ ತಯಾರು ಮಾಡಿದೆ.
ಈ ರಶೀದಿ ಪುಸ್ತಕಗಳನ್ನು ಮದ್ಯದಂಗಡಿ ಮಾಲೀಕರು ಜಿಲ್ಲಾ ಅಬಕಾರಿ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಪ್ರತಿ ರಶೀದಿಯ ಕೆಳಗೆ ಕಾರ್ಬನ್ ಕಾಪಿ ಇಟ್ಟು ಒರಿಜಿನಲ್ ಕಾಪಿಯನ್ನು ಗ್ರಾಹಕರಿಗೆ ನೀಡಬೇಕು. ಮದ್ಯದಂಗಡಿ ಮಾಲೀಕರು ಪ್ರತಿ ವರ್ಷ ಮಾರ್ಚ್ 31ರವರೆಗೂ ಕಾರ್ಬನ್ ಕಾಪಿಯನ್ನು ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.
ಮಧ್ಯ ಪ್ರದೇಶ ಸರ್ಕಾರದ ಈ ಕ್ರಮದಿಂದ ಮದ್ಯಪ್ರಿಯರು ಫುಲ್ ಖುಶ್ ಆಗಿದ್ದಾರೆ. ಇದರಿಂದ ಮದ್ಯದಂಗಡಿ ಮಾಲೀಕರ ಹಗಲುದರೋಡೆಗೆ ಬ್ರೇಕ್ ಬೀಳಲಿದೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ರಶೀದಿ ಪುಸ್ತಕ ಮಾತ್ರವಲ್ಲದೇ ಬಾರ್ಗಳಲ್ಲಿ ಸಿಸಿ ಕ್ಯಾಮರಾಗಳನ್ನೂ ಕಡ್ಡಾಯಗೊಳಿಸಿ ಎಂದು ಅನೇಕರು ಆಗ್ರಹಿಸಿದ್ದಾರೆ.