ಮಹಾರಾಷ್ಟ್ರದಲ್ಲಿ ಮಸೀದಿಗಳ ಧ್ವನಿವರ್ಧಕಗಳಿಗೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಣದ ಕಿಚ್ಚು ಹಚ್ಚಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಗೆ ತಿರುಗೇಟು ನೀಡುವುದನ್ನು ಮುಂದುವರಿಸಿರುವ ಆಡಳಿತಾರೂಢ ಶಿವಸೇನೆ, ಇದೀಗ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರು ರಾಜ್ ಠಾಕ್ರೆ ಅವರನ್ನು ಟೀಕಿಸಿದ್ದ ಹಳೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ರಾಜ್ ಠಾಕ್ರೆ ಒಬ್ಬ ಅಗ್ಗದ ಪ್ರಚಾರ ಗಿಟ್ಟಿಸುವ ವ್ಯಕ್ತಿಯಾಗಿದ್ದಾರೆ ಎಂದು ದೂಷಿಸಿದ್ದಾರೆ.
ರಾಜ್ ಠಾಕ್ರೆ ಕೇವಲ ಅಗ್ಗದ ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಆದರೆ, ಬಾಳಾ ಸಾಹೇಬ್ ಠಾಕ್ರೆ ಅವರು ರಾಜ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ.
ಬಾಳಾ ಸಾಹೇಬ್ ಠಾಕ್ರೆ ಅವರನ್ನು ಅನುಕರಣೆ ಮಾಡಿ ಪ್ರಚಾರ ಗಿಟ್ಟಿಸಲು ರಾಜ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಹೀಗೆ ಅನುಕರಣೆ ಮಾಡುವವರು ಮುಗ್ಗರಿಸುವುದರಲ್ಲಿ ಅನುಮಾನವಿಲ್ಲ ಎಂದು ಪ್ರಿಯಾಂಕ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.