ಲಕ್ನೋ: ಸರ್ಕಾರಿ ನೌಕರರು ಸೇವೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೆ, ಅವರ ವಿವಾಹಿತ ಹೆಣ್ಣು ಮಕ್ಕಳಿಗೆ ಕೂಡ ಸರ್ಕಾರಿ ನೌಕರಿ ಸೇರಲು ಅನುಕೂಲವಾಗುವಂತೆ ಉತ್ತರಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದು, ಸಂಪುಟದಲ್ಲಿ ಈ ಕುರಿತಾದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ವಿವಾಹಿತೆಯರು ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗುವಂತೆ ನಿಯಮ ಜಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಸೇವೆಯಲ್ಲಿರುವ ನೌಕರರು ಮೃತಪಟ್ಟ ಸಂದರ್ಭದಲ್ಲಿ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಅನುಕಂಪ ಆಧಾರಿತ ನೌಕರಿ ನೀಡಲಾಗುತ್ತದೆ. ಇನ್ನುಮುಂದೆ ಅನುಕಂಪ ಆಧಾರಿತ ನೌಕರಿಗೆ ಮದುವೆಯಾದ ಹೆಣ್ಣು ಮಕ್ಕಳಿಗೂ ಕೂಡ ಅರ್ಹರಾಗಿರುತ್ತಾರೆ.
ಇದುವರೆಗೆ ನೌಕರ ಮೃತಪಟ್ಟಲ್ಲಿ ಆತನ ಪತ್ನಿ, ಆತನ ವಿವಾಹಿತ ಅಥವಾ ಅವಿವಾಹಿತ ಪುತ್ರ, ಅವಿವಾಹಿತ ಪುತ್ರಿಗೆ ಮಾತ್ರ ಅನುಕಂಪದ ಆಧಾರದ ಸರ್ಕಾರಿ ಕೆಲಸ ಕೊಡಲಾಗುತ್ತಿದ್ದು, ವಿವಾಹಿತ ಹೆಣ್ಣು ಮಕ್ಕಳನ್ನು ಕೂಡ ಅವಲಂಬಿತ ಮಕ್ಕಳು ಎಂದು ಪರಿಗಣಿಸಿ ಸರ್ಕಾರಿ ನೌಕರಿ ನೀಡಲಾಗುತ್ತದೆ. ಮನೆಯ ಕುಟುಂಬ ಸದಸ್ಯರಲ್ಲಿ ಬೇರೆಯವರು ನೌಕರಿ ಸೇರಲು ನಿರಾಕರಿಸಿದರೆ, ಕುಟುಂಬದ ವಿವಾಹಿತ ಹೆಣ್ಣುಮಕ್ಕಳು ನೌಕರಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.