ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್, ಈ ಬಾರಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಮಾತನಾಡಿ, “ನಾನು ಹುಲಿ, ಕೋರ್ಟ್ ಅಲ್ಲ,” ಎಂದು ತ್ರಿಪುರಾ ನಾಗರಿಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೀಗೊಂದು ಹೇಳಿಕೆ ಕೊಟ್ಟು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದಂತೆ, ತಮ್ಮ ಅವಧಿಯಲ್ಲಿ ರಾಜ್ಯದ ಜನತೆಗಾಗಿ ಕೆಲಸ ಮಾಡುವಂತೆ ಕೋರಿದ ದೇಬ್, ಇದೇ ಭರದಲ್ಲಿ ನ್ಯಾಯಾಂಗದ ವಿರುದ್ಧವಾದ ಕೆಲವೊಂದು ಹೇಳಿಕೆ ಕೊಟ್ಟುಬಿಟ್ಟಿದ್ದಾರೆ.
“ಕೆಲವೊಂದು ಕೆಲಸಗಳನ್ನು ಮಾಡಿದರೆ ನ್ಯಾಯಾಲಯದ ಆದೇಶಗಳ ಉಲ್ಲಂಘನೆಯಾಗುತ್ತದೆ ಎಂದು ಅನೇಕ ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಅದಕ್ಕೆಲ್ಲಾ ಏಕೆ ಹೆದರಿಕೆ ? ನ್ಯಾಯಾಲಯ ತನ್ನ ಆದೇಶ ನೀಡುತ್ತದೆ, ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಪೊಲೀಸರು. ಪೊಲೀಸ್ ನನ್ನ ಹಿಡಿತದಲ್ಲಿದೆ. ಪೊಲೀಸರಿಗೆ ಅನೇಕ ಪ್ರಕ್ರಿಯೆಗಳಿದ್ದು ನಾನು ಅದಕ್ಕೆ ಸಾಕ್ಷಿಯಾಗಿದ್ದಾನೆ,” ಎಂದು ರಾಜ್ಯದ ಗೃಹ ಇಲಾಖೆಯನ್ನೂ ಮುನ್ನಡೆಸುವ ದೇವ್ ಟಿಸಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
BIG NEWS: ರಾಜ್ಯಾದ್ಯಂತ ತೀವ್ರಗೊಂಡ ಅನ್ನದಾತನ ಪ್ರತಿಭಟನೆ; ಪ್ರಧಾನಿ ಮೋದಿ 10 ತಲೆ ಪೋಸ್ಟರ್ ಹಿಡಿದು ರೈತರ ಧರಣಿ
“ನಾನು ಇಲ್ಲಿ ಹುಲಿ. ಜನತೆ ಆರಿಸಿರುವ ಸರ್ಕಾರದ ಮುಖ್ಯಸ್ಥನಾಗಿ ನಾನಿದ್ದೇನೆ. ಸರ್ಕಾರ ಜನರಿಂದಲೇ ಹೊರತು ಕೋರ್ಟ್‌ನಿಂದಲ್ಲ ಎಂದು ಜನರು ಹೇಳುತ್ತಾರೆ. ಕೋರ್ಟ್ ಇರುವುದು ಜನರಿಗೆ, ಜನರು ಇರುವುದು ಕೋರ್ಟ್‌ಗಾಗಿ ಅಲ್ಲ,” ಎಂದು ದೇಬ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
“ಮುಖ್ಯ ಕಾರ್ಯದರ್ಶಿಗಳೂ ಸಹ ಹೀಗೆಲ್ಲಾ ಆಗುವುದಿಲ್ಲ ಎನ್ನುತ್ತಿದ್ದರು. ಆದರೆ ಇದು ಸಂಪುಟದ ನಿರ್ಣಯವಾಗಿದ್ದು, ಆಗಲೇಬೇಕೆಂದು ನಿರ್ಧರಿಸಿದ್ದೆ. ಎಷ್ಟು ಕಾಲ ನಾನು ಈ ಅಧಿಕಾರಿಗಳನ್ನು ಹಾಗೇ ಕೂರಲು ಬಿಡಬೇಕು ? ಅರ್ಹ ಬಡ್ತಿಯನ್ನೇ ಪಡೆಯದೇ ನಿವೃತ್ತಿಯ ಅಂಚಿಗೆ ಸಾಗುವುದು ನಾಗರಿಕ ಸೇವೆಗಳ ಅಧಿಕಾರಿಗಳಿಗೆ ಆಗುವ ಅನ್ಯಾಯ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಅವರು ಹೆದರುತ್ತಾರೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುವುದು ಹುಲಿಯ ಕೆಲಸದಂತೆ. ಸರ್ಕಾರ ನಡೆಸುವ ವ್ಯಕ್ತಿಯಾದ ನಾನು, ಅಧಿಕಾರದಲ್ಲಿರುವ ಪಕ್ಷದ ಮುಖ್ಯಸ್ಥನಾದ ನಾನು ಹುಲಿ ಇದ್ದಂತೆ,” ಎಂದು ಸಂಪುಟದ ಮೂಲಕ ಅಧಿಕಾರಿಗಳಿಗೆ ಬಡ್ತಿ ನೀಡುವ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಸಹ ಆ ವಿಚಾರದ ಬಗ್ಗೆ ಹೀಗೆ ನೇರಾ ನೇರಾ ಮಾತನಾಡಿದ್ದಾರೆ ದೇಬ್.
ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಆದ ದೇಬ್ ರ ಭಾಷಣ ಭಾರೀ ವಿವಾದಕ್ಕೆ ಗ್ರಾಸವಾಗಿದೆ.