ವಿಶ್ವದಾದ್ಯಂತ ಸದ್ಯ ಒಮಿಕ್ರಾನ್ ಭಯ ಶುರುವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ 17 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು ಕೂಡ ವಿಶ್ವದಾದ್ಯಂತ ಕಾಡ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
ಮೇ 2020 ರ ನಂತರ ಕಳೆದ ತಿಂಗಳು ಕಡಿಮೆ ಸಂಖ್ಯೆಯ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮೇ 2020 ನಂತ್ರ ನವೆಂಬರ್ ತಿಂಗಳಿನಲ್ಲಿ ಅತಿ ಕಡಿಮೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 547 ದಿನಗಳ ನಂತರ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಒಂದು ಲಕ್ಷಕ್ಕೆ ಇಳಿದಿದೆ.
ನವೆಂಬರ್‌ನಲ್ಲಿ ದೇಶದಲ್ಲಿ 3.1 ಲಕ್ಷ ಜನರು ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಅಂಕಿಅಂಶಗಳ ಪ್ರಕಾರ, ಹೊಸ ಸೋಂಕುಗಳ ಪ್ರಕರಣಗಳು ನವೆಂಬರ್ ತಿಂಗಳಿನಲ್ಲಿ ಕಡಿಮೆಯಾಗಿವೆ. ಈ ವರ್ಷದ ಆರಂಭದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸಿತ್ತು. ಏಪ್ರಿಲ್-ಮೇ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿ ಹೆಚ್ಚು ವರದಿಯಾಗಿತ್ತು. ಮೇ 6 ರಂದು ಒಂದೇ ದಿನದಲ್ಲಿ ಗರಿಷ್ಠ 4,14,188 ಸೋಂಕಿನ ಪ್ರಕರಣಗಳು ವರದಿಯಾಗಿತ್ತು. ನಂತ್ರ ಕೊರೊನಾ ಸೋಂಕು ನಿಧಾನವಾಗಿ ಕಡಿಮೆಯಾಗುತ್ತ ಬಂತು. ಸತತ 54 ದಿನಗಳ ಕಾಲ ಪ್ರತಿದಿನ 20 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. 156 ದಿನಗಳಲ್ಲಿ ಮೊದಲ ಬಾರಿಗೆ, 24 ಗಂಟೆಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.
ಜನವರಿ 30, 2020 ರಂದು, ಭಾರತದಲ್ಲಿ ಮೊದಲ ಪ್ರಕರಣವು ಕೇರಳದಲ್ಲಿ ವರದಿಯಾಗಿತ್ತು. ಭಾರತದಲ್ಲಿ ಆಗಸ್ಟ್ 7, 2020 ರಂದು ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ತಲುಪಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ ಆಗಸ್ಟ್ 23, 2020 ರಂದು 30 ಲಕ್ಷವಾಗಿತ್ತು. ಸೆಪ್ಟೆಂಬರ್ 5, 2020 ರಂದು 40 ಲಕ್ಷ ತಲುಪಿತ್ತು. ಸೆಪ್ಟೆಂಬರ್ 16, 2020ರಂದು ಸೋಂಕಿತರ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚಿತ್ತು.
ಸೆಪ್ಟೆಂಬರ್ 28, 2020 ರಂದು, ದೇಶದಲ್ಲಿ ಪ್ರಕರಣಗಳ ಸಂಖ್ಯೆ 60 ಲಕ್ಷ ದಾಟಿದ್ರೆ, ಅಕ್ಟೋಬರ್ 11, ಅಕ್ಟೋಬರ್ 29, ನವೆಂಬರ್ 20, ಡಿಸೆಂಬರ್ 19, 2020 ರಂದು ಒಟ್ಟು ಸೋಂಕಿತರ ಸಂಖ್ಯೆ 70 ಲಕ್ಷ, 80 ಲಕ್ಷ, 90 ಲಕ್ಷ ಮತ್ತು ಒಂದು ಕೋಟಿ ತಲುಪಿತ್ತು.
ಅಂಕಿ ಅಂಶಗಳ ಪ್ರಕಾರ, ಈ ವರ್ಷ ಮೇ 4 ರಂದು ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ ಮತ್ತು ಜೂನ್ 23 ರಂದು 3 ಕೋಟಿಯಾಗಿತ್ತು.