ಮೈಸೂರು ರಸ್ತೆ – ಕೆಂಗೇರಿ ನಡುವಿನ ಬೆಂಗಳೂರು ಮೆಟ್ರೋ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಬಳಕೆ ಕಂಡುಬಾರದೇ ಇದ್ದ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸ್ಪಷ್ಟನೆ ಕೊಡಬೇಕೆಂದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಮೆಟ್ರೋನ ಪರ್ಪಲ್ ಲೈನ್‌ನ ಮೈಸೂರು ರಸ್ತೆ – ಕೆಂಗೇರಿ ನಡುವಿನ ಮಾರ್ಗವನ್ನು ಪ್ರಯಾಣಕ್ಕೆ ಮುಕ್ತವಾಗಿಸುವ ಸಂಬಂಧ ಭಾನುವಾರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಕರ್ನಾಟದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.
ಈ ಸಂಬಂಧ ಮೆಟ್ರೋ ನಿಗಮಕ್ಕೆ ಪತ್ರ ಬರೆದಿರುವ ಸಚಿವರು, “ರಾಜ್ಯ ರಾಜಧಾನಿಯಲ್ಲಿ ಈ ಸಮಾರಂಭ ನಡೆದಿದೆ. ರಾಜ್ಯದ ಅಧಿಕೃತ ಭಾಷೆ ಬಳಸದೇ ಇರುವುದು ಗಂಭೀರವಾದ ಪ್ರಮಾದ, ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
“ಈ ಸಮಾರಂಭವು ಆದೇಶಗಳ ಉಲ್ಲಂಘನೆ ಮಾಡಿದ್ದು ದುರದೃಷ್ಟಕರ. ಸಮಾರಂಭದ ನಿರ್ವಹಣೆಯ ಹೊಣೆ ಹೊತ್ತಿದ್ದ ಅಧಿಕಾರಿಗಳು ಇದಕ್ಕೆ ಕಾರಣ. ರಾಜ್ಯದ ಅಧಿಕೃತ ಭಾಷೆಯನ್ನು ಬಳಸಬೇಕಾಗಿರುವುದು ಅವರ ಹೊಣೆ. ಇದು ಒಂದು ರೀತಿಯ ಅಪರಾಧ” ಎಂದು ಸಚಿವರು ಹೇಳಿದ್ದಾರೆ.
ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ಆರಂಭ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಈ ವಿಚಾರವಾಗಿ ಖಂಡಿಸಿದ್ದು, “ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ ನಮ್ಮ ಮೆಟ್ರೋ ಅಧಿಕಾರಿಗಳ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಕನ್ನಡವೇ ಮೊದಲು ಹಾಗೂ ಯಾವಾಗಲೂ ಆದ್ಯತೆ ಪಡೆಯಬೇಕು. ಕನ್ನಡದ ವಿರುದ್ಧ ಇರುವ ಯಾವುದನ್ನೂ ನಾವು ಸಹಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.