ಕಷ್ಟಗಳು ಎದುರಾದಾಗ, ಇಚ್ಛಾಶಕ್ತಿಯು ಅದನ್ನು ಹಿಮ್ಮೆಟ್ಟಿಸುವಷ್ಟು ಶಕ್ತಗೊಳಿಸುತ್ತದೆ ಎಂಬ ಮಾತಿಗೆ ಅನ್ವಯ ಆಗುವಂಥ ಅದ್ಭುತ ವಿಡಿಯೋ ಒಂದು ವೈರಲ್ ಆಗಿದೆ. ಗುರಿ ಸಾಧನೆ ಮಾಡಬೇಕು ಎಂದರೆ ಯಾವ ಕಷ್ಟಗಳೂ ಅದಕ್ಕೆ ತಡೆಯೊಡ್ಡಲಾರವು ಎನ್ನುವ ಮಾತಿಗೆ ಸಾಕ್ಷಿಯಾಗಿದ್ದಾಳೆ ಈ ಬಾಲೆ.
ಸ್ಕೇಟಿಂಗ್ ಎಂದರೆ ಅದಕ್ಕೆ ಬೇಕಿರುವುದು ಎರಡು ಕಾಲುಗಳು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಒಂದೇ ಕಾಲಿನಿಂದ ಸ್ಕೇಟಿಂಗ್ ಆಡುತ್ತಿರುವ ಬಾಲಕಿಯೊಬ್ಬಳು ಎಲ್ಲರ ಊಹೆಯನ್ನೂ ಮೀರಿ ಮಿಂಚುತ್ತಿದ್ದು, ಅದರ ವಿಡಿಯೋ ಇಲ್ಲಿದೆ. ಅಡಾಪ್ಟಿವ್ ಸ್ಕೇಟಿಂಗ್‌ನ ಅರ್ಜೆಂಟೀನಾದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿರುವ ಈಕೆ, ಎಲ್ಲರ ಹೃದಯ ಗೆದ್ದಿದ್ದಾಳೆ.
ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಹಂಚಿಕೊಂಡ ಈ ವಿಡಿಯೋದಲ್ಲಿ ಕೇವಲ ಒಂದು ಕಾಲನ್ನು ಹೊಂದಿರುವ ಮಿಲಿ ಟ್ರೆಜೊ ಎಂಬ ವಿಶೇಷ ಸಾಮರ್ಥ್ಯವಿರುವ ಹುಡುಗಿ ರಿಂಕ್‌ನಲ್ಲಿ ಸಲೀಸಾಗಿ ಸ್ಕೇಟಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಅಲ್ಲಿ ನೆರೆದಿದ್ದ ಜನರು ಜೋರಾಗಿ ಹುರಿದುಂಬಿಸುತ್ತಿದ್ದಾಗ, ಹುಡುಗಿ ತನ್ನ ತೋಳುಗಳನ್ನು ಮೇಲಕ್ಕೆತ್ತಿ ತನ್ನ ಪ್ರದರ್ಶನದತ್ತ ಗಮನಹರಿಸುತ್ತಿರುವುದು ಕಂಡುಬರುತ್ತದೆ. ಸಾಧನೆಯನ್ನು ಪೂರ್ಣಗೊಳಿಸಿದ ಬಳಿಕ ತಾಯಿಯ ಜತೆ ಸೇರಿರುವ ಭಾವುಕ ವಿಡಿಯೋ ಇದಾಗಿದೆ.
ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಚಿಕ್ಕಪುಟ್ಟ ಸಮಸ್ಯೆ ಬಂದಾಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಬದಲು ಇಂಥವರಿಂದ ಸ್ಫೂರ್ತಿ ಪಡೆಯಬೇಕು ಎಂದು ಹಲವರು ಕಮೆಂಟ್ ಹಾಕಿದ್ದಾರೆ.