ದೇಶದಲ್ಲಿ ಡಿಜಿಟಲ್ ವಹಿವಾಟು ಪ್ರಾರಂಭವಾದಾಗಿನಿಂದ ಜನರು ತಮ್ಮ ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ. ಎಲ್ಲರೂ ಆನ್ ಲೈನ್ ವಹಿವಾಟು ನಡೆಸುತ್ತಿದ್ದಾರೆ. ಆದರೆ ಹಣ ತೆಗೆಯಲು ಬ್ಯಾಂಕ್ ಅಥವಾ ಎಟಿಎಂಗಳಿಗೆ ಹೋಗಲೇ ಬೇಕು.ಎಟಿಎಂ ನಲ್ಲಿ ನಕಲಿ, ಹರಿದ ನೋಟು ಬಂದರೆ ಏನು ಮಾಡಬೇಕು..! ತಿಳಿಯಿರಿ.
ಎಟಿಎಂನಿಂದ ನಕಲಿ ನೋಟು ಬಂದರೆ ಏನು ಮಾಡಬೇಕು?
ದೇಶದಲ್ಲಿ 30 ಲಕ್ಷ ಕೋಟಿ ರೂ.ಗಳ ವಹಿವಾಟು ನಗದು ಅಥವಾ ಕರೆನ್ಸಿ ರೂಪದಲ್ಲಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಎಟಿಎಂನಿಂದ ನಕಲಿ ನೋಟುಗಳು ಬಂದಿರುವ ಹಲವು ನಿದರ್ಶನಗಳನ್ನು ನಾವು ಕೇಳಿದ್ದೇವೆ. ಈ ತರಹ ಆದರೆ ಈ ವಿಧಾನದ ಮೂಲಕ ನೀವು ನಕಲಿ ನೋಟು ಕೊಟ್ಟು ಒರಿಜಿನಲ್ ನೋಟು ಪಡೆಯಬಹುದು.
1) ನೀವು ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿದ್ದರೆ, ಈ ನೋಟು ನೈಜವಲ್ಲ ಎಂದು ನಿಮಗೆ ಸ್ವಲ್ಪವಾದರೂ ಅನಿಸಿದರೆ, ಮೊದಲು ಅದರ ಫೋಟೋ ತೆಗೆದುಕೊಳ್ಳಿ.
2) ನಂತರ, ಎಟಿಎಂನಲ್ಲಿ ಫಿಕ್ಸ್ ಮಾಡಲಾದ ಸಿಸಿಟಿವಿ ಕ್ಯಾಮೆರಾದ ಮುಂದೆ ನೋಟನ್ನು ತಲೆಕೆಳಗಾಗಿ ತೋರಿಸಬೇಕು. ನೋಟು ಎಟಿಎಂನಿಂದಲೇ ಹೊರಬಂದಿದೆ ಎಂದು ಕ್ಯಾಮೆರಾ ದಾಖಲಿಸುsತ್ತದೆ.
3) ನಂತರ ನಿಮ್ಮ ಎಟಿಎಂ ವಹಿವಾಟಿನ ರಸೀದಿಯನ್ನು ತೆಗೆದುಕೊಳ್ಳಿ, ಅದರ ಫೋಟೋ ತೆಗೆದುಕೊಂಡು ಅದನ್ನು ಸೇವ್ ಮಾಡಿಕೊಳ್ಳಿ.
4) ನಂತರ ಎಟಿಎಂನಿಂದ ನೋಟು ಮತ್ತು ರಸೀದಿಯೊಂದಿಗೆ ಬ್ಯಾಂಕಿಗೆ ಹೋಗಿ. ಇಡೀ ವಿಷಯದ ಬಗ್ಗೆ ಬ್ಯಾಂಕ್ ಉದ್ಯೋಗಿಗೆ ತಿಳಿಸಿ. ನಂತರ ನಿಮಗೆ ಒಂದು ಫಾರ್ಮ್ ಅನ್ನು ಒದಗಿಸಲಾಗುತ್ತದೆ. ಅದನ್ನು ಭರ್ತಿ ಮಾಡಿದ ನಂತರ, ನಕಲಿ ನೋಟಿನ ಜೊತೆಗೆ ರಸೀದಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.
5) ನಂತರ ಬ್ಯಾಂಕ್ ಈ ನಕಲಿ ನೋಟನ್ನು ಪರಿಶೀಲಿಸಿ ಮತ್ತು ನಂತರ ನಿಮಗೆ ಒರಿಜಿನಲ್ ನೋಟನ್ನು ನೀಡುತ್ತದೆ.
ಹರಿದ ನೋಟು ಬಂದರೆ ಏನು ಮಾಡಬೇಕು..?
ಮನೆಯಲ್ಲಿ ಹಣವಿಲ್ಲವೆಂದಾಗ ಜನರು ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಕೆಲವೊಮ್ಮೆ ಎಟಿಎಂನಿಂದ ಹರಿದ ಹಣ ಬರುತ್ತದೆ. ಇದ್ರಿಂದ ಚಿಂತೆಗೊಳ್ಳುವ ಜನರು ಆ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಇನ್ಮುಂದೆ ಹರಿದ ನೋಟುಗಳು ಸಿಕ್ಕಿದ್ರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಸುಲಭವಾಗಿ ಬದಲಿಸಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಎಟಿಎಂನಲ್ಲಿ ಹರಿದ ನೋಟುಗಳು ಸಿಕ್ಕರೆ ಅದನ್ನು ಬ್ಯಾಂಕ್ ನಲ್ಲಿ ಬದಲಿಸಿಕೊಳ್ಳಬಹುದು. ಸರ್ಕಾರಿ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳು ಇದನ್ನು ಬದಲಿಸಲು ನಿರಾಕರಿಸುವಂತಿಲ್ಲ.
ರಿಸರ್ವ್ ಬ್ಯಾಂಕ್ 2017 ರ ಏಪ್ರಿಲ್ನಲ್ಲಿ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಎಲ್ಲಾ ಬ್ಯಾಂಕುಗಳು ತಮ್ಮ ಪ್ರತಿಯೊಂದು ಶಾಖೆಯಲ್ಲಿ ಎಲ್ಲ ಹರಿದ ನೋಟುಗಳನ್ನು ಬದಲಿಸಲು ಅವಕಾಶ ನೀಡಬೇಕು.
ನೋಟು ವಿನಿಮಯ ಮಾಡುವ ಬ್ಯಾಂಕ್ ಪ್ರಕ್ರಿಯೆ ತುಂಬಾ ಸುಲಭ. ಬ್ಯಾಂಕ್, ನೋಟು ಬದಲಿಸಲು ನಿರಾಕರಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ನೋಟು ಬದಲಿಸಲು ನಿರಾಕರಿಸಿದ ಬ್ಯಾಂಕುಗಳಿಗೆ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ನೀವು ಯಾವ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಿದ್ದೀರೋ ಅದೇ ಬ್ಯಾಂಕ್ ಗೆ ಹೋಗಬೇಕಾಗುತ್ತದೆ. ನಂತರ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಿದ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಅರ್ಜಿಯಲ್ಲಿ ನೀಡಬೇಕಾಗುತ್ತದೆ. ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಸ್ವೀಕರಿಸಿದ ಸ್ಲಿಪ್ ನಕಲನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ. ಸ್ಲಿಪ್ ಇಲ್ಲವೆಂದಾದ್ರೆ ಮೊಬೈಲ್ ನಲ್ಲಿರುವ ದಾಖಲೆ ನೀಡಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ ಕೂಡಲೇ ಬ್ಯಾಂಕ್ ಅಧಿಕಾರಿಗಳು ಖಾತೆ ವಿವರಗಳನ್ನು ಪರಿಶೀಲಿಸುತ್ತಾರೆ.