ಬೆಂಗಳೂರು : ಇಂದಿನಿಂದ (ಫೆ.14) ಬೆಂಗಳೂರಿನಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ-2024ರ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ -10(ಬಿ) ರನ್ವಯ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135(ಸಿ) ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತದಾನದ ಪ್ರಯುಕ್ತ, ಫೆ. 14 ಸಂಜೆ 5.00 ಗಂಟೆಯಿಂದ ಫೆ.17 ಬೆಳಗ್ಗೆ 6.00 ಗಂಟೆಯವರಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) ಪಾನನಿರೋಧ ದಿನ ಜಾರಿಗೊಳಿಸಲಾಗುತ್ತಿದೆ.
ಆದ್ದರಿಂದ ಫೆ.14 ರಿಂದ ಬೆಂಗಳೂರಿನಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ.
ಪಾರದರ್ಶಕವಾಗಿ ಚುನಾವಣೆ ನಡೆಸಲು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತದಾನ ಅಂತ್ಯಗೊಳ್ಳುವ 48 ಗಂಟೆ ಪೂರ್ವದಲ್ಲಿ ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟ ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಸಿ ಮದ್ಯ ಸಾಗಣೆ, ಮಾರಾಟ ಅಥವಾ ದಾಸ್ತಾನು ಮಾಡಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮದ್ಯ ಮಾರಾಟ ನಿಷೇಧಕ್ಕೆ ಬಾರ್ ಮಾಲೀಕರ ವಿರೋಧ
ಮದ್ಯ ಮಾರಾಟ ನಿಷೇಧಕ್ಕೆ ಬಾರ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸೋದು ಕೇವಲ 16 ಸಾವಿರ ಮತದಾರರಷ್ಟೇ, ಶಿಕ್ಷಕರ ಕ್ಷೇತ್ರದಲ್ಲಿ ಎಲ್ಲರೂ ವಿದ್ಯಾವಂತರೇ ಇರುವ ಕಾರಣ ಸಮಸ್ಯೆ ಆಗುವುದಿಲ್ಲ. 4 ದಿನ ಮದ್ಯ ಮಾರಾಟ ಬಂದ್ ಮಾಡಿದ್ರೆ ಬೆಂಗಳೂರಲ್ಲೇ 300 ಕೋಟಿ ನಷ್ಟ ಆಗಲಿದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ಹೇಳಿದ್ದರು.