ಗರ್ಭಧರಿಸಲು ದೈಹಿಕವಾಗಿ, ಮಾನಸಿಕವಾಗಿ 18 ವರ್ಷಗಳ ಒಳಗೆ ಪೂರ್ಣ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಗರ್ಭಧರಿಸಲು ಸಿದ್ದವಾಗಿರುವುದಿಲ್ಲ ಎಂಬ ಮಾಹಿತಿಯನ್ನು ಪ್ರತಿಯೊಬ್ಬ ಪಾಲಕರಿಗೂ ತಲುಪಿಸಿ ತಾಯಿ ಮರಣವಾಗುವ ಸಾಧ್ಯತೆಗಳನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ತಾಯಿ ಮರಣ ಹಾಗೂ ಶಿಶು ಮರಣ ತಡೆಗಟ್ಟುವಿಕೆ ಕುರಿತು ನೂತನ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿಯೆಂದು ಖಚಿತ ಪಡಿಸುವ ಪರೀಕ್ಷೆಯನ್ನು ಕೈಗೊಂಡ ತಕ್ಷಣವೇ ಗರ್ಭಿಣಿಯರ ದಾಖಲಾತಿ ಮಾಡಬೇಕು. ಈ ಮೂಲಕ ಪ್ರತಿಯೊಂದು ಹಂತದಲ್ಲಿ ಪರೀಕ್ಷೆ ಮಾಡಿಸುವ ಕುರಿತು ವೈದ್ಯರು ಹಾಗೂ ಸಿಬ್ಬಂದಿ ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ 11 ಗ್ರಾಂ ಗಿಂತ ಹೆಚ್ಚಿರುವ ದಿಶೆಯಲ್ಲಿ ಗರ್ಭೀಣಿಯರ ನಿರಂತರ ನಿಗಾವಹಿಸಬೇಕು. ಹೆರಿಗೆಗಾಗಿ ತೆರಳುವ ಊರಿನ ವೈದ್ಯರೊಂದಿಗೆ ಸಮನ್ವಯ ಕೈಗೊಂಡು ಯಾವುದೇ ತೊಡಕುಗಳು ಉಂಟಾಗದಂತೆ ಹೆರಿಗೆ ಮಾಡಿಸುವ ಕಾರ್ಯಕೈಗೊಳ್ಳಬೇಕು ಎಂದು ಸೂಚಿಸಿದರು.
ಗಂಡಾಂತರವೆನಿಸುವ ಅಧಿಕ ತೂಕ, ಬಹಳ ದಿನಗಳ ನಂತರ ಗರ್ಭವತಿಯಾಗಿರುವ ಸಾಧ್ಯತೆ, ಅಧಿಕ ರಕ್ತದೊತ್ತಡ, ಪ್ರಥಮ ಹೆರಿಗೆ, ಹಿಂದಿನ ಹೆರಿಗೆ ಸಿಜೆರಿಯನ್, ಕಡಿಮೆ ಲಭ್ಯತೆಯ ರಕ್ತದ ಗುಂಪು, ಅವಳಿ ಜವಳಿ ಗರ್ಭ ಮುಂತಾದ ಸಂದರ್ಭಗಳಲ್ಲಿ ತಜ್ಞವೈದ್ಯರ ಬಳಿ ಹೆರಿಗೆ ಮಾಡಿಸಲು ಪಾಲಕರಲ್ಲಿ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಇತರ ಇಲಾಖೆಗಳ ಸಹಯೋಗದೊಂದಿಗೆ ನಿರಂತರವಾಗಿ ಜಾಗೃತಿ ನೀಡಬೇಕು. 20 ವರ್ಷಗಳ ನಂತರ ಗರ್ಭಧರಿಸುವಿಕೆಯು ತಾಯಿಯ ಆರೋಗ್ಯ ದೃಷ್ಟಿಯಿಂದ ಅತಿಮುಖ್ಯ ಎಂಬ ಸಂದೇಶವನ್ನು ಎಲ್ಲರಿಗೂ ತಿಳಿಸುವ ಕಾರ್ಯ ಮಾಡಬೇಕು. ಯಾವುದೇ ಸರಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಗರ್ಭಿಣಿಗೆ ಆಗಮಿಸಿದಾಗ ವೈದ್ಯರು ಹಾಗೂ ಸಿಬ್ಬಂದಿ ಮುತುವರ್ಜಿ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ಬಾಬು, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ಪ್ರಸೂತಿ ತಜ್ಞರಾದ ಡಾ.ವಿರೇಂದ್ರಕುಮಾರ್, ಫಿಜಿಷಿಯನ್ ಡಾ.ಮಂಜುನಾಥ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಸೇರಿದಂತೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.