ಬೆಂಗಳೂರು :ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆಗಳಿಗೆ ನೇರವಾಗಿ ಮಾಸಾಶನ ಮೊತ್ತ ಪಾವತಿಯಾಗುವುದರಿಂದ, ಫಲಾನುಭವಿಗಳು ಕೂಡಲೆ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು.
ಸರ್ಕಾರದಿಂದ ಸಾಮಾಜಿಕ ಭಧ್ರತೆಯ ವಿವಿಧ ಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಯಡಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಪಿಂಚಣಿ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಕಳೆದ ಸೆಪ್ಟಂಬರ್ ತಿಂಗಳಿನಿಂದಲೇ ನೇರ ಹಣ ಸಂದಾಯ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸಲು ಸರ್ಕಾರ ತೀರ್ಮಾನಿಸಿರುತ್ತದೆ.
ಎನ್ಸಿಪಿಐ ಜೋಡಣೆ ಮಾಡಿಸದಿರುವ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಬರುವ ಮಾಸಿಕ ಪಿಂಚಣಿ ಅತಿ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ. ಹೀಗಾಗಿ ಎನ್ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಜೋಡಣೆ ಮಾಡಿಸದಿರುವ ಫಲಾನುಭವಿಗಳು ನಿರ್ಲಕ್ಷ್ಯ ತೋರದೆ, ಕೂಡಲೆ ತಾವು ಹೊಂದಿರುವ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಬೇಕು.
ಮಾಸಾಶನ ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಬಾಕಿ ಇರುತ್ತದೆ. ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ, ಎನ್ಪಿಸಿಐ ಮ್ಯಾಪಿಂಗ್ ಬಾಕಿ ಇರುವುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ಮ್ಯಾಪಿಂಗ್ ಕಾರ್ಯ ಬಾಕಿ ಇದ್ದಲ್ಲಿ, ನೇರವಾಗಿ ಫಲಾನುಭವಿಗಳೇ ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಥವಾ ಅಂಚೆ ಖಾತೆ ಪುಸ್ತಕದೊಂದಿಗೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ನೀಡಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಕೊಳ್ಳಬೇಕು.