ತೋಟಗಾರಿಕೆ ಬೆಳೆಗಳ ಉತ್ಪಾದನೆ, ಉತ್ಪಾದಕತೆಯನ್ನು ಹೆಚ್ಚಿಸಿ, ಸಂಸ್ಕರಣೆ, ಶೇಖರಣೆ, ಸಾಗಾಣಿಕೆ ಹಾಗೂ ಮಾರುಕಟ್ಟೆ ವ್ಯವಸೆಯನ್ನು ಉತ್ತಮಗೊಳಿಸಿ ತೋಟಗಾರಿಕೆ ಉದ್ಯಮದ ಸಮಗ್ರ ಅಭಿವೃದ್ಧಿಯನ್ನು ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.
2 ಹೆಕ್ಟೇರ್ (5.00 ಎಕ್ರೆ) ಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ತೋಟಗಳ ರಚನೆಗಾಗಿ ವಿವಿಧ ಘಟಕಗಳಾದ ಸಸ್ಯ ಉತ್ಪಾದನೆ, ಪ್ರದೇಶ ವಿಸ್ತರಣೆ, ನೀರಾವರಿ, ರಸಾವರಿ, ನಿಖರ ಬೇಸಾಯ ಮುಂತಾದವುಗಳನ್ನು ಒಳಗೊಂಡ ತೋಟ ಆಭಿವೃದ್ಧಿಗಾಗಿ ಶೆ.40 ರಂತೆ ಗರಿಷ್ಠ ರೂ. 30.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಹಾಗೂ ಸಂರಕ್ಷಿತ ಬೇಸಾಯದಡಿ 2500 ಚ.ಮೀ.ಗೂ ಹೆಚ್ಚಿನ ಆಧುನಿಕ ರೀತಿಯ ಹಸಿರು ಮನೆ ನಿರ್ಮಾಣಕ್ಕೆ, ಶೇ. 50 ರ ದರದಲ್ಲಿ ಗರಿಷ್ಠ ರೂ. 56.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಸೌಲಭ್ಯ ಲಭ್ಯವಿದೆ.
ಸಮಗ್ರ ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ ಹೌಸ್, ಹಣ್ಣು ಮಾಗಿಸುವ ಘಟಕ, ಶೀತಲ ವಾಹನ ಖರೀದಿ, ಚಿಲ್ಲರೆ ಮಾರಾಟ ಮಳಿಗೆ, ಶೀತಲ ಘಟಕ, ಪ್ರಾಥಮಿಕ ಸಂಸ್ಕರಣೆ ಘಟಕಗಳ ನಿರ್ಮಾಣಕ್ಕೆ ಗರಿಷ್ಠ ರೂ. 50.75 ಲಕ್ಷ ಸಾಲ ಆಧಾರಿತ ಪ್ರತಿ ಘಟಕಗಳಿಗೆ ಶೇ. 35 ರ ದರದಲ್ಲಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಶೇಖರಿಸಲು ವಿವಿಧ ಸಾಮರ್ಥ್ಯದ ಶೀತಲ, ಉಗ್ರಾಣಗಳ ನಿರ್ಮಾಣ, ವಿಸ್ತರಣೆ ಹಾಗೂ ಆಧುನೀಕರಣಗೊಳಿಸಲು ಸಹ ಶೇ. 35ರ ಸಹಾಯಧನ ಸೌಲಭ್ಯವಿದ್ದು, ಈ ಯೋಜನೆಗಳನ್ನು ವೈಯುಕ್ತಿಕ ಅಥವಾ ಸಂಸ್ಥೆಗಳು ಪಡೆಯಬಹುದಾಗಿದೆ.
ಸರ್ಕಾರಿ ಸಂಸ್ಥೆಗಳಲ್ಲಿ, ಉತ್ತಮ ಜಾತಿಯ ಗುಣಮಟ್ಟದ ಸಸಿಗಳ ಉತ್ಪಾದನೆಯಲ್ಲಿ ತಾಯಿ ಮರಗಳ ಘಟಕ, ಹಸಿರುಮನೆ, ಅಂಗಾಂಶ ಕೃಷಿ ಪ್ರಯೋಗಾಲಯ, ವೈರಸ್ ಇಂಡೆಕ್ಸಿಂಗ್ ಅನುಕೂಲ, ಗುಣಮಟ್ಟ ಧೃಢೀಕರಣ ಪ್ರಯೋಗಾಲಯ ಮುಂತಾದವುಗಳ ಸ್ಥಾಪನೆಗಾಗಿ ಶೇ.100 ರಷ್ಟು ಸಹಾಯಧನ ಸೌಲಭ್ಯವಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು, ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ಮೊ.ನಂ: 8095991105 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.