ಬೆಂಗಳೂರು: ಅಕ್ರಮವಾಗಿ ಹಳೆ ನೋಟು ವಿನಿಮಯ ಮಾಡಿದ್ದ ಕ್ಯಾಷಿಯರ್ ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಕಲಬುರಗಿ ನೆಹರು ಗಂಜ್ ಶಾಖೆ ಹೆಡ್ ಕ್ಯಾಶಿಯರ್ ಶ್ರೀಹರಿ ಕಮನ್ ಕರ್ ಅವರಿಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಕ್ರಮವಾಗಿ ಹಳೆ ನೋಟು ವಿನಿಮಯ ಪ್ರಕರಣದಲ್ಲಿ ಶ್ರೀಹರಿಗೆ ಜೈಲು ಶಿಕ್ಷೆ ಹಾಗೂ 60 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸರ್ಕಾರಿ ಅಧಿಕಾರಿಯಾಗಿ ಕ್ರಿಮಿನಲ್ ದುರ್ವರ್ತನೆ ತೋರಿದ ಮತ್ತು ವಿಶ್ವಾಸದ್ರೋಹ ಎಸಗಿದ್ದಕ್ಕಾಗಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ಅವರು ಐಪಿಸಿ ಸೆಕ್ಷನ್ 409 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಆರೋಪಿ ಶ್ರೀಹರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ನಿರ್ದಿಷ್ಟ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಂಡು ಅಕ್ರಮ ಎಸಗಿರುವುದು ಕಂಡುಬಂದಿದೆ. 2016ರ ನವೆಂಬರ್ 10ರಿಂದ 30ರವರೆಗೆ 1.09 ಕೋಟಿ ರೂ.ಗಳನ್ನು ಅಕ್ರಮವಾಗಿ ವಿನಿಮಯ ಮಾಡಿದ್ದಾರೆ. ಸರ್ಕಾರ 2016ರ ಮೇ 8ಕ್ಕೆ ಹಳೆಯ ನೋಟುಗಳ ವಿನಿಮಯ ನಿಷೇಧಿಸಿದ್ದರೂರು 1000 ಮತ್ತು 500 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡಿರುವುದು ದೃಢಪಟ್ಟಿದೆ.
ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ, ಅಕ್ರಮ ನೋಟು ವಿನಿಮಯ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು.