ನಗರ ಪ್ರದೇಶಗಳಲ್ಲಿ ಬಹುತೇಕ ಎಲ್ಲರೂ ಈಗ ಕ್ರೆಡಿಟ್ ಕಾರ್ಡ್ ಬಳಸ್ತಾರೆ. ಕ್ರೆಡಿಟ್ ಕಾರ್ಡ್‌ಗಳ ಮೇಲೆ ಕೆಲವು ಆಫರ್‌ಗಳು, ಶಾಪಿಂಗ್‌ನಲ್ಲಿ ಡಿಸ್ಕೌಂಟ್ ಹೀಗೆ ಬಗೆ ಬಗೆಯ ಕೊಡುಗೆಗಳು ಕೂಡ ಬಳಕೆದಾರರಿಗೆ ಲಭ್ಯವಿವೆ. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವುದು ಸಹ ಈಗ ಸಾಮಾನ್ಯ. ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಂಡು ಅದನ್ನು ಬಳಸುವುದಿಲ್ಲ, ಹಾಗೇ ಇಟ್ಟುಬಿಡುತ್ತಾರೆ. ಈ ರೀತಿ ಮಾಡುವುದರಿಂದ ನಷ್ಟ ಅನುಭವಿಸಬೇಕಾಗಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸದಿದ್ದರೆ ಏನಾಗುತ್ತದೆ ಎಂಬುದನ್ನು ತಿಳಿಯೋಣ.
ಕ್ರೆಡಿಟ್ ಸ್ಕೋರ್
ಇತ್ತೀಚಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳಲು ಮತ್ತು ಉತ್ತಮ ಆರ್ಥಿಕ ಖ್ಯಾತಿಯನ್ನು ಹೊಂದಲು ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಬಯಸಿದರೆ ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು. ಕ್ರೆಡಿಟ್ ಕಾರ್ಡ್ ಮೂಲಕ ನಿಯಮಿತವಾಗಿ ಪಾವತಿಗಳನ್ನು ಮಾಡಿದರೆ ಮತ್ತು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ. ಅದೇ ಸಮಯದಲ್ಲಿ ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಮತ್ತು ಅದನ್ನು ಬಳಸದಿದ್ದರೆ, ಅದು ಕ್ರೆಡಿಟ್ ಸ್ಕೋರ್‌ನ ಮೇಲೆ ಪರಿಣಾಮ ಬೀರಬಹುದು. ಕ್ರೆಡಿಟ್ ಸ್ಕೋರ್‌ನಲ್ಲಿ ಸ್ವಲ್ಪ ಇಳಿಕೆಯಾಗಬಹುದು.
ನಿಷ್ಕ್ರಿಯತೆಯ ಶುಲ್ಕ
ಕೆಲವು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನಿಷ್ಕ್ರಿಯತೆಯ ಶುಲ್ಕವನ್ನು ವಿಧಿಸುವ ಅನೇಕ ಕಂಪನಿಗಳಿವೆ. ನಿಮ್ಮ ಕಾರ್ಡ್ ಕೂಡ ಆ ವರ್ಗಕ್ಕೆ ಬಂದರೆ, ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸದಿದ್ದರೆ ನಿಷ್ಕ್ರಿಯತೆಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಾರ್ಷಿಕ ಶುಲ್ಕ
ಕ್ರೆಡಿಟ್ ಕಾರ್ಡ್ ಮೇಲೆ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ. ಬಳಕೆದಾರರು ಒಂದು ವರ್ಷದಲ್ಲಿ ನಿರ್ದಿಷ್ಟ ಮೊತ್ತದವರೆಗೆ ಪಾವತಿಸಿದರೆ, ಅವರ ಕ್ರೆಡಿಟ್ ಕಾರ್ಡ್‌ನಲ್ಲಿನ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಇದಕ್ಕೊಂದು ಮಿತಿ ನಿಗದಿಪಡಿಸಲಾಗುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸದಿದ್ದರೂ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ.
ರಿವಾರ್ಡ್ ಮತ್ತು ಡಿಸ್ಕೌಂಟ್‌ಗಳಲ್ಲಿ ನಷ್ಟ
ಕ್ರೆಡಿಟ್ ಕಾರ್ಡ್‌ನಲ್ಲಿ ಕೆಲವೊಂದು ರಿವಾರ್ಡ್‌ಗಳಿರುತ್ತವೆ. ಆದರೆ ಕಾರ್ಡ್ ಬಳಸದಿದ್ದಲ್ಲಿ ಅದು ನಿಮಗೆ ಸಿಗುವುದಿಲ್ಲ. ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಸಿಗುವ ರಿಯಾಯಿತಿಗಳು ಕೂಡ ತಪ್ಪಿ ಹೋಗುತ್ತವೆ.