ಬೆಂಗಳೂರು: ಆರ್‌ಬಿಐ ನಿಯಮ ಉಲ್ಲಂಘಿಸಿ ನಿಷೇಧಿತ ನೋಟುಗಳ ನಗದೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರಿಗೆ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬಳ್ಳಾರಿ ಜಿಲ್ಲೆ ಹೊಸಪೇಟೆಯ ಡ್ಯಾಮ್ ರಸ್ತೆಯ ಎಸ್.ಬಿ.ಎಂ. ಶಾಖೆ ಮಾಜಿ ಹೆಡ್ ಕ್ಯಾಶಿಯರ್ ಎಸ್. ಗೋಪಾಲಕೃಷ್ಣ ಮತ್ತು ಎಲ್ಐಸಿ ಏಜೆಂಟ್ ಕೆ. ರಾಘವೇಂದ್ರ ಶಿಕ್ಷೆಗೆ ಗುರಿಯಾದವರು. ಪ್ರಕರಣದ ಮೊದಲ ಆರೋಪಿ ಗೋಪಾಲಕೃಷ್ಣ ಅವರಿಗೆ 2.10 ಲಕ್ಷ ರೂ., ಎರಡನೇ ಆರೋಪಿ ರಾಘವೇಂದ್ರ ಗೆ 1.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ನಿಷೇಧಿತ ನೋಟುಗಳ ನಗದೀಕರಣಕ್ಕೆ ಆರ್‌ಬಿಐನಿಂದ ನಿಯಮಾವಳಿ ರೂಪಿಸಲಾಗಿತ್ತು. ಆದರೆ ನಿಯಮಾವಳಿ ಉಲ್ಲಂಘಿಸಿದ ಗೋಪಾಲಕೃಷ್ಣ ಮತ್ತು ರಾಘವೇಂದ್ರ ನೋಟುಗಳನ್ನು ನಗದೀಕರಿಸಿದ್ದರು. ಸಿಬಿಐ ಅಧಿಕಾರಿಗಳು ಇವರಿಬ್ಬರ ವಿರುದ್ಧ 2017ರ ಮಾರ್ಚ್ ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.