ಬೆಂಗಳೂರು : ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಇನ್ನಿತರೆ ಯೋಜನೆಯಡಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ.
ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ವಿವರವನ್ನು ನೋಂದಾಯಿಸಿ ರೈತರ ಗುರುತಿನ ಚೀಟಿ ಸಂಖ್ಯೆ (ಎಫ್.ಐ.ಡಿ) ಪಡೆದುಕೊಳ್ಳುವುದು ಅವಶ್ಯವಾಗಿರುತ್ತದೆ. ಫ್ರೂಟ್ಸ್ ಮಾಹಿತಿಯು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ನೀಡುವ ಹೊರತಾಗಿಯು ಇತರೆ ಇಲಾಖೆಗಳಿಗೂ ಸಹ ಉತ್ತಮ ಮಾಹಿತಿಯಾಗಿದ್ದು, ಅತಿವೃಷ್ಠಿ, ಅನಾವೃಷ್ಠಿ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳಾಗಲು ಹಾಗೂ ಪರಿಹಾರದ ಮೊತ್ತ ರೈತರ ಖಾತೆಗೆ ನೇರವಾಗಿ ಜಮೆ ಮಾಡಲು ರೈತರು ಎಫ್.ಐ.ಡಿ ಹೊಂದಿರುವುದು ಕಡ್ಡಾಯ.
ಸರ್ಕಾರವು 2023ರ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರೂಟ್ಸ್‍ನಲ್ಲಿ ನೊಂದಾವಣಿಯಾಗಿರುವ ಬೆಳೆ ಮತ್ತು ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಿರುವುದರಿಂದ, ಈಗಾಗಲೇ ಫ್ರುಟ್ಸ್‍ನಲ್ಲಿ ನೋಂದಣಿಯಾಗಿರುವ 307160 ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟು ಹೋಗದಂತೆ ಎಲ್ಲಾ ಸರ್ವೇ ನಂಬರ್‍ಗಳನ್ನು ನೋಂದಾಯಿಸಿಕೊಳ್ಳಲು ತಿಳಿಸಿದೆ.
ಫ್ರೂಟ್ಸ್‍ನಲ್ಲಿ ನೋಂದಣಿಯಾಗದಿರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು FRUITS ನಲ್ಲಿ ದಾಖಲಿಸಿಕೊಂಡು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸೌಲಭ್ಯವನ್ನು ಪಡೆಯಲು ತಿಳಿಸಿದೆ.
ಫ್ರೂಟ್ಸ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತ ಭಾಂದವರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಈ ಕೂಡಲೇ ಜೋಡಣೆ ಮಾಡಲು ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕು ತಿಳಿಸಿದ್ದಾರೆ.