ತಿರುವನಂತಪುರಂ: ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕೊರೋನಾ ಲಸಿಕೆ ಇನ್ನೂ ಕೂಡ ತೆಗೆದುಕೊಂಡಿಲ್ಲವಾದರೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೊರೋನಾ ಚಿಕಿತ್ಸೆ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.
ಮಂಗಳವಾರ (ನವೆಂಬರ್ 30) ದಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಕೋವಿಡ್ ಪ್ರೋಟೋಕಾಲ್‌ಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಲಸಿಕೆಗಳನ್ನು ತೆಗೆದುಕೊಳ್ಳದವರಿಗೆ ಇನ್ನು ಮುಂದೆ ಉಚಿತ ಚಿಕಿತ್ಸೆ ಸಿಗುವುದಿಲ್ಲ ಎಂದು ಹೇಳಿದೆ. ಥಿಯೇಟರ್‌ಗಳಿಗೆ ಈಗಿರುವ ಶೇ.50 ರಿಂದ ಶೇ.100 ಆಸನಕ್ಕೆ ಅವಕಾಶ ನೀಡುವಂತೆ ಚಿತ್ರೋದ್ಯಮ ಒತ್ತಾಯಿಸುತ್ತಿರುವುದರಿಂದ ನಿಯಮಗಳನ್ನು ಸಡಿಲಿಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕೇರಳದಲ್ಲಿ 18 ವಯಸ್ಸಿಗಿಂತ ಮೇಲ್ಪಟ್ಟ ಶೇ.96 ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಹಾಗೂ ಶೇ.63 ರಷ್ಟು ಜನರು ಎರಡೂ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ. ಸುಮಾರು 1.4 ಮಿಲಿಯನ್ ಜನರು ಎರಡನೇ ಲಸಿಕೆ ತೆಗೆದುಕೊಳ್ಳುವ ದಿನಾಂಕವನ್ನು ಮೀರಿದ್ದಾರೆ. ಅಂತಹ ಎಲ್ಲಾ ಜನರು ಆದಷ್ಟು ಶೀಘ್ರದಲ್ಲಿ ಎರಡನೇ ಡೋಸ್ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.
ಲಸಿಕೆಗಳನ್ನು ತೆಗೆದುಕೊಳ್ಳದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ ಸಿಗುವುದಿಲ್ಲ ಎಂದು ಸಿಎಂ ವಿಜಯನ್ ತಿಳಿಸಿದ್ದಾರೆ. ಎರಡನೇ ಡೋಸ್ ಲಸಿಕೆಯನ್ನು ಶೀಘ್ರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೂ ಡಿಸೆಂಬರ್ 15 ರೊಳಗೆ ಗರಿಷ್ಠ ಸಂಖ್ಯೆಯ ಜನರಿಗೆ ಎರಡನೇ ಡೋಸ್ ನೀಡುವಂತೆ ನೋಡಿಕೊಳ್ಳಲು ವಿಜಯನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನು ಸ್ಥಳೀಯ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ ತಪ್ಪದೆ ಪಾಲಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಓಮಿಕ್ರಾನ್ ರೂಪಾಂತರದ ಭಯ ಇರುವುದರಿಂದ ಪ್ರತಿಯೊಬ್ಬರೂ ಅದರ ಬಗ್ಗೆ ಜಾಗರೂಕರಾಗಿರಬೇಕು. ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.