ತಂಬಾಕು ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಮಗೆಲ್ಲಾ ಗೊತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ನಾವು ನಿರ್ಲಕ್ಷಿಸುತ್ತಿರುವ ಮತ್ತೊಂದು ಅಭ್ಯಾಸವಿದೆ, ಅದು ದೀರ್ಘಕಾಲ ಕುಳಿತುಕೊಳ್ಳುವುದು. ಕಂಪ್ಯೂಟರ್ ಮತ್ತು ಡೆಸ್ಕ್‌ಟಾಪ್ ಎದುರು ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಡಿಜಿಟಲ್ ಯುಗ ಇದು. ಕಚೇರಿಯಲ್ಲಿ ಕೆಲಸ ಮಾಡುವುದು ಮಾತ್ರವಲ್ಲ, ಟಿವಿ ನೋಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ಹೀಗೆ ದಿನದಲ್ಲಿ 10-12 ಗಂಟೆಗಳ ಕಾಲ ಕುಳಿತುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.
ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. ಈ ಅಭ್ಯಾಸವು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ, ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಸ್ಥೂಲಕಾಯತೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಕ್ಯಾನ್ಸರ್ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ.
ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ವಿವಿಧ ಸಂಶೋಧನೆಗಳು ಬಹಿರಂಗಪಡಿಸಿವೆ. 8 ಗಂಟೆಗಳಿಗಿಂತ ಹೆಚ್ಚು ಕಾಲ ಚಲಿಸದೆ ಕುಳಿತುಕೊಳ್ಳುವವರಿಗೆ ಶ್ವಾಸಕೋಶ, ಗರ್ಭಾಶಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ.
ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು. ಸಕ್ರಿಯವಾಗಿರುವ ಮತ್ತು ನಿಯಮಿತವಾಗಿ ನಡೆಯುವವರಿಗಿಂತ ಕ್ಯಾನ್ಸರ್ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ವಿವಿಧ ಭಾಗಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಸಿಗದೇ ಇರುವುದು ಇದಕ್ಕೆ ಕಾರಣ. ಅದಕ್ಕಾಗಿಯೇ ನಾವು ನಿಯಮಿತವಾಗಿ ನಡೆಯಬೇಕು ಮತ್ತು ವ್ಯಾಯಾಮ ಮಾಡಬೇಕು.
ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತಾಗ ದೇಹದ ಸ್ನಾಯುಗಳು ಮತ್ತು ಮೂಳೆಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ರಕ್ತ ಪರಿಚಲನೆಯು ಕಡಿಮೆಯಾಗುತ್ತದೆ. ಕುಳಿತು ಕೆಲಸ ಮಾಡುವಾಗ ಮಧ್ಯೆ ಆಗಾಗ ಎದ್ದು ಸ್ವಲ್ಪ ನಡೆಯಬೇಕು. ಅಷ್ಟೇ ಅಲ್ಲ ನಿತ್ಯವೂ ಒಂದಿಷ್ಟು ವ್ಯಾಯಾಮ ಅಥವಾ ಯೋಗವನ್ನು ಮಾಡಿ.