ಭಾರತದಲ್ಲಿ ಹವಾಮಾನ ಬದಲಾದಂತೆ ಡೆಂಗ್ಯೂ, ಮಲೇರಿಯಾ, ಝಿಕಾ ವೈರಸ್‌ನಂತಹ ರೋಗಗಳು ವೇಗವಾಗಿ ಹರಡಲು ಪ್ರಾರಂಭಿಸಿವೆ. ಡೆಂಗ್ಯೂ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಜನರು ಸಹ ಡೆಂಗ್ಯೂಗೆ ಬಲಿಯಾಗುತ್ತಾರೆ. ತಜ್ಞರ ಪ್ರಕಾರ ಹವಾಮಾನ ಬದಲಾವಣೆಯಿಂದ ಇದೆಲ್ಲವೂ ಸಂಭವಿಸುತ್ತಿದೆ.
ಬ್ರೆಜಿಲ್ ಕೂಡ ಡೆಂಗ್ಯೂ ಪೀಡಿತ ದೇಶವಾಗಿದೆ. 2024ರ ಜನವರಿ ಮತ್ತು ಏಪ್ರಿಲ್ ನಡುವೆ ಇಲ್ಲಿ ಸುಮಾರು 4.25 ಲಕ್ಷ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 1.8 ರಷ್ಟಿದೆ. ಬ್ರೆಜಿಲ್‌ನಲ್ಲಿ ಡೆಂಗ್ಯನಿಂದ ಈವರೆಗೆ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನ ಅನೇಕ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಅಮೆರಿಕದಲ್ಲಿಯೂ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಲ್ಯಾಟಿನ್ ಅಮೆರಿಕದ ಪೆರುವಿನಲ್ಲಂತೂ ಪರಿಸ್ಥಿತಿ ಹದಗೆಟ್ಟಿದೆ. ಜನವರಿಯಿಂದೀಚೆಗೆ ಇಲ್ಲಿ 1,35,000 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 117 ರೋಗಿಗಳು ಸಾವನ್ನಪ್ಪಿದ್ದಾರೆ. ಅರ್ಜೆಂಟೀನಾದಲ್ಲಿ ಕೂಡ ದಿನದಿಂದ ದಿನಕ್ಕೆ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಮೆಕ್ಸಿಕೋ, ಉರುಗ್ವೆ, ಚಿಲಿಯಂತಹ ದೇಶಗಳ ಹೆಚ್ಚಿನ ಜನಸಂಖ್ಯೆಯು ಡೆಂಗ್ಯೂಗೆ ತುತ್ತಾಗುತ್ತವೆ. ಬ್ರೆಜಿಲ್, ಪರಾಗ್ವೆ, ಅರ್ಜೆಂಟೀನಾ ಮತ್ತು ಉರುಗ್ವೆಯಲ್ಲಿ ಕೂಡ ಡೆಂಗ್ಯೂವಿನಿಂದ ತೀವ್ರ ಪರಿಸ್ಥಿತಿ ಎದುರಾಗಿದೆ. ಡೆಂಗ್ಯೂ ಮತ್ತು ಮಲೇರಿಯಾ ಸೊಳ್ಳೆಗಳು ಹುಡುಕಿದರೂ ಸಿಗದ 4 ದೇಶಗಳಿವೆ. ಅವುಗಳಲ್ಲಿ ನ್ಯೂ ಕ್ಯಾಲೆಡೋನಿಯಾ, ಐಸ್ಲ್ಯಾಂಡ್, ಸೀಶೆಲ್ಸ್, ಫ್ರೆಂಚ್ ಪಾಲಿನೇಷ್ಯಾ ಸೇರಿವೆ.
ಡೆಂಗ್ಯೂಗೆ ತುತ್ತಾದರೆ ರೋಗಿಯ ಆರೋಗ್ಯವು ಹಠಾತ್ ಕ್ಷೀಣಿಸಲು ಪ್ರಾರಂಭಿಸುತ್ತದೆ. ಪ್ಲೇಟ್ಲೆಟ್ಸ್ ವೇಗವಾಗಿ ಕುಸಿಯುತ್ತದೆ. ವಿಪರೀತ ಜ್ವರ, ಆಯಾಸ, ತೀವ್ರ ಮೈಕೈ ನೋವು ಇದ್ದಲ್ಲಿ ನಿರ್ಲಕ್ಷ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇವೆಲ್ಲವೂ ಡೆಂಗ್ಯೂ ಜ್ವರದ ಲಕ್ಷಣಗಳಾಗುವೆ.
ಡೆಂಗ್ಯೂ ಜ್ವರಕ್ಕೆ ತುತ್ತಾದರೆ ಆ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಅಥವಾ ವಯಸ್ಕರ ದೇಹದಲ್ಲಿ ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಅಧಿಕ ಜ್ವರದ ಜೊತೆಗೆ ವಾಂತಿ ಅಥವಾ ಭೇದಿಯಿದ್ದಾಗ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು. ಆದ್ದರಿಂದ ತಕ್ಷಣ ವೈದ್ಯರ ಬಳಿಗೆ ಹೋಗಿ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ರೋಗಿಗೆ ನೀರು, ಎಳನೀರು, ಓಆರ್‌ಎಸ್ ದ್ರಾವಣ, ಎಲೆಕ್ಟ್ರೋಲೈಟ್ ದ್ರಾವಣ, ಹಣ್ಣಿನ ರಸವನ್ನು ಆಗಾಗ ಕೊಡಲು ಮರೆಯಬೇಡಿ.