ಫೋರ್ಬ್ಸ್ ಪ್ರಕಾರ, ಮುಖೇಶ್ ಅಂಬಾನಿ, $ 117.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಜಾಗತಿಕವಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ, ಅವರ ತಂದೆ, ಧೀರೂಭಾಯಿ ಅಂಬಾನಿ ಸ್ಥಾಪಿಸಿರುವ ಮುಖೇಶ್ ಪೆಟ್ರೋಕೆಮಿಕಲ್ಸ್, ದೂರಸಂಪರ್ಕ, ಚಿಲ್ಲರೆ ವ್ಯಾಪಾರ ಮತ್ತು ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳ ವಿಶಾಲವಾದ ಸಾಮ್ರಾಜ್ಯವನ್ನು ನೋಡಿಕೊಳ್ಳುತ್ತಿದ್ದಾರೆ.
ಅವರ ಈ ವ್ಯವಹಾರ ಸಾಮ್ರಾಜ್ಯದಲ್ಲಿ ಮುಖೇಶ್ ಅಥವಾ ಅವರ ನಿಕಟ ಕುಟುಂಬ ಸದಸ್ಯರಾದ, ಪತ್ನಿ ನೀತಾ ಅಂಬಾನಿ, ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅತಿ ಹೆಚ್ಚು ಷೇರುಗಳನ್ನು ಹೊಂದಿರಬಹುದೆಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು.
ಹೌದು, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿ ದೊಡ್ಡ ಪಾಲನ್ನು ಹೊಂದಿರುವ ವ್ಯಕ್ತಿ ಮುಖೇಶ್ ಅವರ ತಾಯಿ ಮತ್ತು ಧೀರೂಭಾಯಿ ಅಂಬಾನಿಯವರ ಪತ್ನಿ ಕೋಕಿಲಾಬೆನ್ ಅಂಬಾನಿ. ಕೋಕಿಲಾಬೆನ್ ಒಟ್ಟು 1,57,41,322 ಷೇರುಗಳನ್ನು ಹೊಂದಿದ್ದಾರೆ, ಇದು ಕಂಪನಿಯಲ್ಲಿ 0.24% ಪಾಲನ್ನು ಹೊಂದಿದೆ. ಇನ್ನು ಮುಖೇಶ್ ಅಂಬಾನಿಯವರ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ತಲಾ 80,52,021 ಷೇರುಗಳನ್ನು ಹೊಂದಿದ್ದಾರೆ, ಇದು ಸರಿಸುಮಾರು 0.12% ಪಾಲು ಹೊಂದಿದೆ.
ಅಂಬಾನಿ ಕುಟುಂಬವು ಒಟ್ಟಾರೆಯಾಗಿ ರಿಲಯನ್ಸ್‌ನ ಸುಮಾರು 50.39% ಷೇರುಗಳನ್ನು ಪ್ರವರ್ತಕ ಗುಂಪಿನಂತೆ ಹೊಂದಿದ್ದು, ಸಾರ್ವಜನಿಕ ಷೇರುದಾರರು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಕಾರ್ಪೊರೇಟ್ ಘಟಕಗಳು ಉಳಿದ 49.61% ಅನ್ನು ಹೊಂದಿದ್ದಾರೆ.
ಗಣನೀಯ ಷೇರುಗಳನ್ನು ಹೊಂದಿದ್ದರೂ ಕೋಕಿಲಾಬೆನ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ನ ದೈನಂದಿನ ಕಾರ್ಯಾಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಆದರೆ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 18,000 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. 2005 ರಲ್ಲಿ ರಿಲಯನ್ಸ್ ವಿಭಜನೆಯ ಸಂದರ್ಭದಲ್ಲಿ ತಮ್ಮ ಪುತ್ರರ ನಡುವಿನ ವಿವಾದಗಳನ್ನು ಬಗೆಹರಿಸುವಲ್ಲಿ ಕೋಕಿಲಾಬೆನ್ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದರು.