ಮುಂಬೈ: ಚಹಾ ಮಾಡದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಗುಲಾಮಗಿರಿಯ ಸಂಕೇತವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಮಾನತೆಯ ಆಧಾರದ ಮೇಲೆ ನಡೆಯುವ ಮದುವೆ ಸ್ನೇಹ ಒಪ್ಪಂದ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಹೇಳಿದ್ದಾರೆ.
ಪತ್ನಿ ಟೀ ಮಾಡದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾಗಿ ಪತಿ ಹೇಳಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಹೆಂಡತಿ ಗುಲಾಮಗಿರಿಯ ಸಂಕೇತವಲ್ಲ ಎಂದು ಪಂಢರಾಪುರದ 35 ವರ್ಷದ ವ್ಯಕ್ತಿಗೆ 2016ರಲ್ಲಿ ಸ್ಥಳೀಯ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
2013 ರಲ್ಲಿ ಪಂಢರಾಪುರದ ಸಂತೋಷ್ ಪತ್ನಿಯೊಂದಿಗೆ ಜಗಳವಾಡಿದ್ದ, ಕೇಳಿದ ಕೂಡಲೇ ಟೀ ಮಾಡಿಕೊಡದ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಘಟನೆ ನಡೆದ ಒಂದು ವಾರದ ನಂತರ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಳು. ಸ್ಥಳೀಯ ನ್ಯಾಯಾಲಯ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.
ಬಾಂಬೆ ಹೈಕೋರ್ಟ್ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಲಿಂಗ ಅಸಮಾನತೆ ಸಮಾಜದಲ್ಲಿದೆ. ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಪತ್ನಿಯೇ ಮಾಡಬೇಕೆನ್ನುವ ನಿರೀಕ್ಷೆ ಇದೆ. ಸಾಮಾಜಿಕ ಪರಿಸ್ಥಿತಿಯಿಂದ ಇಂತಹ ವಾತಾವರಣ ಸೃಷ್ಟಿಸಿದ್ದು, ಪುರುಷರು ಕೂಡ ಇಂತಹ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಹೆಂಡತಿಯನ್ನು ಗುಲಾಮರೆಂದು ಪರಿಗಣಿಸುತ್ತಾರೆ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.