ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ “ಹಮ್ ಆಪ್ಕೆ ಹೈ ಕೌನ್” ಬಾಲಿವುಡ್ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಇಂದಿಗೂ, ಚಿತ್ರದ ಹಾಡುಗಳು, ಕಥೆ ಮತ್ತು ಪ್ರೇಮ್ ಮತ್ತು ನಿಶಾ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳನ್ನು ಮೋಡಿ ಮಾಡುತ್ತದೆ.
ಇತ್ತೀಚೆಗೆ, ನಿರ್ದೇಶಕ ಸೂರಜ್ ಆರ್. ಬರ್ಜಾತ್ಯ ಇಂಡಿಯನ್ ಐಡಲ್‌ನಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಎವರ್‌ಗ್ರೀನ್ ಚಿತ್ರದ ಬಗ್ಗೆ ಕೆಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್, ಆ ಪಾತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ, ಆರಂಭದಲ್ಲಿ ಕರೀಷ್ಮಾ ಕಪೂರ್ ಅವರನ್ನು ಪರಿಗಣಿಸಿದ್ದೆವು ಎಂದು ಹೇಳಿದ್ದಾರೆ.
ಹೌದು, ಕರೀಷ್ಮಾ ಕಪೂರ್ ಅವರ “ಪ್ರೇಮ್ ಖೈದಿ” ಚಿತ್ರದ ಅಭಿನಯವನ್ನು ನೋಡಿದ ನಂತರ, ಬರ್ಜಾತ್ಯ, ಪ್ರಭಾವಿತರಾಗಿದ್ದು ಅವರನ್ನು “ಹಮ್ ಆಪ್ಕೆ ಹೈ ಕೌನ್” ನಲ್ಲಿ ನಟಿಸಲು ಬಯಸಿದ್ದರು. ಮನೆಗೆ ಹಿಂತಿರುಗುವಾಗ, ಅವರು ತಮ್ಮ ತಂದೆಯೊಂದಿಗೆ ಈ ಬಗ್ಗೆ ಮಾತನಾಡಿದ್ದು “ಆಕೆ ಬಹಳಷ್ಟು ಸಾಮರ್ಥ್ಯ ಹೊಂದಿದ್ದಾಳೆ. ನಾವು ಇನ್ನೂ ‘ಹಮ್ ಆಪ್ಕೆ ಹೈ ಕೌನ್’ ಚಿತ್ರಕಥೆಯ ಹಂತದಲ್ಲಿದ್ದೇವೆ” ಎಂದು ಹೇಳಿದ್ದರು.
ಆದರೆ, ಅವರ ತಂದೆ ರಾಜಕುಮಾರ್ ಬರ್ಜಾತ್ಯ, ಕರೀಷ್ಮಾ ಕಪೂರ್ ಪಾತ್ರಕ್ಕೆ ತುಂಬಾ ಚಿಕ್ಕವರಾಗಿ ಕಾಣುತ್ತಾರೆ ಎಂದು ಹೇಳಿದ್ದರು.
ಅಂತಿಮವಾಗಿ, ನಿಶಾ ಪಾತ್ರ ಮಾಧುರಿ ದೀಕ್ಷಿತ್ ಅವರ ಪಾಲಾಗಿದ್ದು, ಅಭಿನಯವು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಯಿತು. ವರ್ಷಗಳ ನಂತರ, ಕರೀಷ್ಮಾ ಕೂಡ “ಹಮ್ ಆಪ್ಕೆ ಹೈ ಕೌನ್” ನಲ್ಲಿ ನಿಶಾ ಪಾತ್ರವನ್ನು ನಿರ್ವಹಿಸಲು ತನಗೂ ಇಷ್ಟವಿತ್ತು ಎಂದು ಒಪ್ಪಿಕೊಂಡಿದ್ದರು.