ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ.
ಅಭಿವೃದ್ಧಿಶೀಲ ದೇಶದ ಮಧ್ಯಮ ಹಾಗೂ ಬಡ ವರ್ಗದ ಮಂದಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಏನೆಲ್ಲಾ ಹರಸಾಹಸ ಮಾಡುತ್ತಿರುವ ನಡುವೆ ಈ ಸೆಲೆಬ್ರಿಟಿಗಳ ಜೀವನಶೈಲಿಗಳು ಪಾಶ್ಚಾತ್ಯ ದೇಶಗಳ ಸಿರಿವಂತರಿಗೆ ಸರಿಸಮನಾಗಿಬಿಟ್ಟಿದೆ.
ಅದು ಯಾವ ಮಟ್ಟಿಗೆ ಎಂದರೆ; ಆಮದು ಮಾಡಿಕೊಂಡ ಲಕ್ಸುರಿ ಕಾರುಗಳ ಶೋಕಿ ಎಲ್ಲಾ ಹಳೆಯ ವಿಚಾರವಾಗಿಬಿಟ್ಟಿದೆ. ಈಗೇನಿದ್ದರೂ ತಮ್ಮ ಕಲೆಕ್ಷನ್‌ನಲ್ಲಿ ಖಾಸಗಿ ಜೆಟ್ ಹೊಂದುವುದು ಸಿನೆಮಾ ಹಾಗೂ ಕ್ರಿಕೆಟ್ ತಾರೆಯರಿಗೆ ಪ್ರತಿಷ್ಠೆಯ ವಿಚಾರವಾಗಿದೆ. ತಮ್ಮ ಚಿತ್ರಗಳ ಶೂಟಿಂಗ್‌ಗಳಿಗೆ ಮಾತ್ರವಲ್ಲದೇ, ಜಗತ್ತಿನ ಯಾವುದೇ ಮೂಲೆಗೆ ಬೇಕಾದರೂ ಪ್ರವಾಸಕ್ಕೆ ತೆರಳಲು ಖಾಸಗಿ ಜೆಟ್‌ಗಳನ್ನು ಅವಲಂಬಿಸಿದ್ದಾರೆ ಈ ಸೆಲೆಬ್ರಿಟಿಗಳು. ತಮ್ಮದೇ ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಖಾಸಗಿ ಜೆಟ್‌ನಲ್ಲಿ ಓಡಾಡುವ ಒಂದಷ್ಟು ಸೆಲೆಬ್ರಿಟಿಗಳ ಪಟ್ಟಿ ಇಂತಿದೆ:
ಅಜಯ್ ದೇವಗನ್:
ವರದಿಗಳ ಪ್ರಕಾರ, ಅಜಯ್ ದೇವಗನ್ ಹಾಕರ್ 800 ಹೆಸರಿನ ಆರು ಆಸನಗಳ ಜೆಟ್ ಹೊಂದಿದ್ದಾರೆ. ಖಾಸಗಿ ಜೆಟ್ ಹೊಂದಿರುವ ಬಾಲಿವುಡ್‌ನ ಮೊದಲ ನಟರಾದ ದೇವಗನ್ ಖರೀದಿಸಿರುವ ಈ ವಿಮಾನದ ಬೆಲೆ ₹84 ಕೋಟಿ. ಅಜಯ್ ತಮ್ಮ ಸಿನೆಮಾಗಳ ಪ್ರಚಾರ ಕಾರ್ಯಕ್ರಮಗಳು ಮತ್ತು ಚಿತ್ರೀಕರಣಕ್ಕಾಗಿ ಆಗಾಗ್ಗೆ ಪ್ರಯಾಣಿಸುತ್ತಾರೆ.
ಅಕ್ಷಯ್ ಕುಮಾರ್:
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ವರ್ಷಕ್ಕೆ 3-4 ಬ್ಲಾಕ್ ಬಸ್ಟರ್ ಚಲನಚಿತ್ರಗಳ ನಿರ್ಮಾಣಕ್ಕೆ ಮುಂದಾಗುತ್ತಾರೆ. ಶೂಟಿಂಗ್, ಪ್ರಚಾರದ ಸಮಯದಲ್ಲಿ ಹಾಗೂ ಸಹೋದ್ಯೋಗಿಗಳು ಮತ್ತು ಕುಟುಂಬದೊಂದಿಗೆ ವಿಹಾರಕ್ಕಾಗಿ ಬೇಕಾದ ಸ್ಥಳಗಳಿಗೆ ಹಾರಲೆಂದು ಅಕ್ಷಯ್ 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ.
ಅಮಿತಾಬ್ ಬಚ್ಚನ್:
ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ನಟನೆಯಿಂದ ಎಷ್ಟು ಪ್ರಸಿದ್ಧರೋ ಹಾಗೇ ತಮ್ಮ ಐಷಾರಾಮಿ ಜೀವನಶೈಲಿ ವಿಚಾರದಲ್ಲೂ ಹೆಸರಾಗಿದ್ದಾರೆ. ಅಮಿತಾಬ್ ತಮ್ಮದೇ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ. ಬಿಗ್ ಬಿ ಪುತ್ರ ಅಭಿಷೇಕ್ ಒಮ್ಮೆ ತಮ್ಮ ಖಾಸಗಿ ಜೆಟ್‌ನ ಲುಕ್ಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ತಮ್ಮ ತಂದೆಯನ್ನು ಅಭಿನಂದಿಸಲು ಅವರು ತಮ್ಮ ಖಾಸಗಿ ಜೆಟ್‌ನ ಫೋಟೋವನ್ನು ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದರು.
ಶಾರುಖ್ ಖಾನ್:
ದೇಶದ ಅತ್ಯಂತ ಸಿರಿವಂತ ನಟರಲ್ಲಿ ಒಬ್ಬರಾದ ಶಾರುಖ್ ಖಾನ್, ಮುಂಬಯಿಯಲ್ಲಿರುವ ತಮ್ಮ ’ಮನ್ನತ್’ ಬಂಗಲೆಯಿಂದ ಹೆಸರು ಮಾಡಿದಷ್ಟೇ, ಜಗತ್ತಿನಾದ್ಯಂತ ಅನೇಕ ಆಸ್ತಿಗಳನ್ನು ಹೊಂದುವ ಮೂಲಕ ಸುದ್ದಿ ಮಾಡಿದ್ದಾರೆ. ಇದೇ ನಟ ತಮ್ಮ ಕುಟುಂಬಸ್ಥರು ಹಾಗು ಸಹನಟರೊಂದಿಗೆ ತಮ್ಮದೇ ಖಾಸಗಿ ಜೆಟ್‌ನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಜೋನಾಸ್:
ಇದೀಗ ಹಾಲಿವುಡ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಕುಟುಂಬದೊಂದಿಗೆ ಖಾಸಗಿ ಜೆಟ್ ಒಂದನ್ನು ಹೊಂದಿದ್ದಾರೆ. ತಮ್ಮ ಚಿತ್ರಗಳ ಪ್ರೊಮೋಷನ್ ಹಾಗೂ ಹಾಲಿಡೇ ಮಾಡಲೆಂದು ಆಕೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ.
ಹೃತಿಕ್ ರೋಷನ್:
ಬಾಲಿವುಡ್‌ನ ಗ್ರೀಕ್ ಗಾಡ್ ಎಂದೇ ಖ್ಯಾತರಾದ ಹೃತಿಕ್ ರೋಷನ್ ಸಹ ತಮ್ಮದೇ ಖಾಸಗಿ ಜೆಟ್ ಹೊಂದಿದ್ದು, ತಮ್ಮ ಚಿತ್ರಗಳ ಪ್ರಚಾರ ಹಾಗೂ ಹಾಲಿಡೇಗಳಿಗಾಗಿ ಈ ಜೆಟ್ ಬಳಸುತ್ತಾರೆ.
ರಾಮ್ ಚರಣ್:
ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಪುತ್ರರಾದ ರಾಮ್ ಚರಣ್ ತೇಜ ಸಹ ತಮ್ಮದೇ ಖಾಸಗಿ ಜೆಟ್ ಹೊಂದಿದ್ದಾರೆ. ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ ದೇಶದ ನಟರಲ್ಲಿ ಒಬ್ಬರಾದ ರಾಂ ಚರಣ್, ಈ ವಿಚಾರವಾಗಿ ಫೋರ್ಬ್ಸ್ ಇಂಡಿಯಾ 2013ರಲ್ಲಿ ಪಟ್ಟಿ ಮಾಡಿದ್ದ ಅಗ್ರ 100 ಮಂದಿಯಲ್ಲಿ ಒಬ್ಬರಾಗಿದ್ದಾರೆ. ’ಟ್ರೂಜೆಟ್’ ಹೆಸರಿನ ಏರ್‌ಲೈನ್ ಸೇವೆಯನ್ನೂ ಒದಗಿಸುತ್ತಿರುವ ರಾಮ್ ಚರಣ್ ತೇಜ, ಈ ಕ್ಷೇತ್ರಕ್ಕೆ ಕಾಲಿಟ್ಟ ಟಾಲಿವುಡ್‌ನ ಮೊದಲ ನಟರಾಗಿದ್ದಾರೆ.
ಅಕ್ಕಿನೇನಿ ನಾಗಾರ್ಜುನ:
ಎವರ್‌ಗ್ರೀನ್ ಸೂಪರ್‌ಸ್ಟಾರ್ ನಾಗಾರ್ಜುನ ಸಹ ತಮ್ಮದೇ ಖಾಸಗಿ ಜೆಟ್ ಹೊಂದಿದ್ದು, ತಮ್ಮ ಕುಟುಂಬದೊಂದಿಗೆ ಹಾಲಿಡೇ ವಿಹಾರಗಳಿಗೆ ತೆರಳಲು ಅದನ್ನು ಬಳಸುತ್ತಾರೆ.
ಅಲ್ಲು ಅರ್ಜುನ್:
’ಪುಷ್ಪಾ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಹ ಖಾಸಗಿ ಜೆಟ್ ಮಾಲೀಕರ ಕ್ಲಬ್‌ನಲ್ಲಿದ್ದಾರೆ. ತಮ್ಮ ರೇಸ್ ಗುರ‍್ರಂ ತಂಡದೊಂದಿಗೆ ಚಿತ್ರದ ಪ್ರೊಮೋ ಕಾರ್ಯದಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್, ಇದೇ ಜೆಟ್‌ನಲ್ಲಿ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲಾ ಮದುವೆಗೆಂದು ತಮ್ಮ ಕುಟುಂಬದೊಂದಿಗೆ ಉದಯ್ಪುರಕ್ಕೆ ತೆರಳಿದ್ದರು.
ಪವನ್ ಕಲ್ಯಾಣ್:
ಟಾಲಿವುಡ್‌ನ ಮತ್ತೊಬ್ಬ ಜನಪ್ರಿಯ ನಟ ಪವನ್ ಕಲ್ಯಾಣ್ ಸಹ ಖಾಸಗಿ ಜೆಟ್ ಮಾಲೀಕರಾಗಿದ್ದು, ತಮ್ಮ ಸಿನೆಮಾ ಹಾಗೂ ರಾಜಕೀಯ ಪ್ರವಾಸಗಳಿಗೆ ಬಳಸುತ್ತಾರೆ.