ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿತ್ತು. ಇನ್ನೂ ಆ ಶಾಕ್ನಿಂದ ಜನರು ಹೊರ ಬಂದಿಲ್ಲ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇ ತನಿಖೆ ವೇಳೆ ಬಯಲಾದ ಮಾಹಿತಿಯೊಂದು ಹೌಹಾರುವಂತೆ ಮಾಡಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಬೆಂಬಲ ನೀಡಿದ ಕಾರಣಕ್ಕೆ ಕನ್ಹಯ್ಯ ಲಾಲ್ ರನ್ನು ಬರ್ಬರವಾಗಿ ಕೊಲೆ ಮಾಡಲಾಯಿತು. ಅದೇ ರೀತಿ ಈ ಇಬ್ಬರು ದುಷ್ಕರ್ಮಿಗಳು ಉದಯಪುರದಲ್ಲಿ ಇನ್ನೊಬ್ಬ ಉದ್ಯಮಿಯನ್ನ ಶಿರಚ್ಛೇದ ಮಾಡುವ ಪ್ಲಾನ್ ಮಾಡಿದ್ದರು ಅನ್ನೋ ವರದಿ ಐಎಎನ್ಎಸ್ ಕೊಟ್ಟಿದೆ. ಅಷ್ಟೇ ಅಲ್ಲ, ಈ ಪ್ರಕರಣ ಆರೋಪಿಗಳಾಗಿರೋ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಇವರಿಬ್ಬರೂ ಐಎಸ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಅನ್ನೋ ಅನುಮಾನ ಕೂಡಾ ಇದೆ.
ಜೂನ್ 7 ರಂದು ಉದಯ್ಪುರದ ಈ ಉದ್ಯಮಿ, ನೂಪುರ್ ಶರ್ಮಾಗೆ ಸಪೋರ್ಟ್ ಮಾಡುವಂತಹ ಮೆಸೇಜ್ ಒಂದನ್ನ ಪೋಸ್ಟ್ ಮಾಡಿದ್ದಾರೆ. ಆ ನಂತರ ಇವರ ವಿರುದ್ಧ ದೂರು ಕೂಡಾ ದಾಖಲಿಸಿ, ಬಂಧನ ಮಾಡಲಾಯಿತು. ಒಂದು ದಿನದ ನಂತರ ಅವರನ್ನ ಬಿಡುಗಡೆ ಮಾಡಲಾಯಿತು ಅಂತ ಉದ್ಯಮಿ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ. ಜೂನ್ 9ರಂದು ಇವರ ಅಂಗಡಿಗೆ ಅಪರಿಚಿತರು ಪದೇ ಪದೇ ಬಂದು ಹೋಗಿದ್ದಾರೆ. ಪ್ರಾಣಕ್ಕೆ ಅಪಾಯ ಕಾದಿದೆ ಅನ್ನೋ ಅರಿವಾದ ತಕ್ಷಣ ಇವರು ಪಟ್ಟಣದಿಂದ ಹೊರಗೆ ಹೋಗಿದ್ದಾರೆ. ಇದೇ ಕಾರಣಕ್ಕೆ ಇಂದು ಸುರಕ್ಷಿತವಾಗಿರೋದು ಅಂತ ಹೇಳಲಾಗುತ್ತಿದೆ.
ಈ ಪ್ರಕರಣ ಕುರಿತಂತೆ ಇನ್ನೂ ಹೆಚ್ಚಿನ ಕೂಲಂಕುಷ ಪರಿಶೀಲನೆ ನಡೆಯುತ್ತಿದ್ದು ಅನೇಕ ವಿಚಾರಗಳು ಬಯಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಕಾರ್ಯಪ್ರವೃತರಾಗಿದ್ದಾರೆ.